May 15, 2026
Friday, May 15, 2026
spot_img

‘ಪರೀಕ್ಷಾ ಮಾಫಿಯಾ’ ವಿರುದ್ಧ ಕೇಂದ್ರದ ಮಹತ್ವದ ನಿರ್ಧಾರ: ಬದಲಾಗಲಿದೆ NEET ಪರೀಕ್ಷಾ ವಿಧಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯ ವಹಿಸಿಕೊಂಡಿದೆ. ಈ ಕುರಿತು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳಿಗೆ ದಾರಿ ಇಲ್ಲದಂತೆ ಮಾಡಲು ಪರೀಕ್ಷಾ ಪದ್ಧತಿಯನ್ನೇ ಬದಲಾಯಿಸಲಾಗುವುದು ಹಾಗೂ ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ ನೀಟ್ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ.

ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಈಗಾಗಲೇ ರದ್ದುಗೊಳಿಸಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜೂನ್ 21ರಂದು ಮರುಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಶಿಕ್ಷಣ ಸಚಿವಾಲಯವು ಈ ಗೊಂದಲಗಳನ್ನು ಆದಷ್ಟು ಬೇಗ ಬಗೆಹರಿಸಿ, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಸಜ್ಜಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಮೇ 3ರಂದು ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ, ಅಂದರೆ ಮೇ 7ರಂದು ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಗಂಭೀರ ದೂರೊಂದು ಬಂದಿತ್ತು. ಪರೀಕ್ಷೆಗಿಂತ ಮುಂಚಿತವಾಗಿಯೇ ಸಾಮಾಜಿಕ ಜಾಲತಾಣ ಹಾಗೂ ಕೆಲವು ಕೇಂದ್ರಗಳಲ್ಲಿ ಹರಿದಾಡುತ್ತಿದ್ದ ‘ಗೆಸ್ ಪೇಪರ್’ ನಲ್ಲಿದ್ದ ಬಹುತೇಕ ಪ್ರಶ್ನೆಗಳು ಮೂಲ ಪರೀಕ್ಷೆಯಲ್ಲೂ ಬಂದಿದ್ದವು ಎಂದು ಆರೋಪಿಸಲಾಗಿತ್ತು.

ಕೂಡಲೇ ಎಚ್ಚೆತ್ತ ಉನ್ನತ ಶಿಕ್ಷಣ ಸಚಿವಾಲಯವು ವಿವಿಧ ರಾಜ್ಯಗಳ ಸಹಕಾರದೊಂದಿಗೆ ತನಿಖೆಯನ್ನು ತೀವ್ರಗೊಳಿಸಿತ್ತು. ಮೇ 12ರಂದು ನಡೆಸಿದ ಆಳವಾದ ಪರಿಶೀಲನೆಯಲ್ಲಿ, ಗೆಸ್ ಪೇಪರ್ ಹೆಸರಿನಲ್ಲಿ ಸೋರಿಕೆಯಾಗಿದ್ದು ಅಸಲಿ ಪ್ರಶ್ನೆಪತ್ರಿಕೆಯೇ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೇ 13ರಂದು ಪರೀಕ್ಷೆಯನ್ನು ರದ್ದುಗೊಳಿಸುವ ಕಠಿಣ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಚಿವರು ವಿವರಿಸಿದರು.

“ದೇಶದಲ್ಲಿ ಹಲವು ದಿನಗಳಿಂದ ಸಕ್ರಿಯವಾಗಿರುವ ಪರೀಕ್ಷಾ ಮಾಫಿಯಾದ ವಿರುದ್ಧ ನಾವು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ವಿದ್ಯಾರ್ಥಿಗಳ ಭವಿಷ್ಯ ಮತ್ತು ಅವರ ಹಕ್ಕುಗಳನ್ನು ಕಸಿಯಲು ಬಿಡುವುದಿಲ್ಲ” ಎಂದು ಧರ್ಮೇಂದ್ರ ಪ್ರಧಾನ್ ಗುಡುಗಿದ್ದಾರೆ.

ಪ್ರಸ್ತುತ ಈ ಇಡೀ ಹಗರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ ವಹಿಸಲಾಗಿದ್ದು, ವಿಚಾರಣೆ ಚುರುಕಿನಿಂದ ಸಾಗಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಅವರಿಗೆ ಕಠಿಣ ಶಿಕ್ಷೆ ಖಚಿತ ಎಂದು ಸಚಿವರು ಎಚ್ಚರಿಸಿದ್ದಾರೆ. ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳು ಮತ್ತು ತಪ್ಪು ಮಾಹಿತಿಗಳನ್ನು ನಂಬದಂತೆ ಅವರು ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !