ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ನ ಪ್ರತಿಷ್ಠಿತ ಆಕ್ಸ್ಫರ್ಡ್ ಯುನಿವರ್ಸಿಟಿ ಹಾಸ್ಪಿಟಲ್ಸ್ ಎನ್ಎಚ್ಎಸ್ ಫೌಂಡೇಷನ್ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತ ಮೂಲದ ಮೇಘನಾ ಪಂಡಿತ್ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಟ್ರಸ್ಟ್ನ ಸಿಇಒ ಆದ ಮೊದಲ ಮಹಿಳೆ ಹಾಗೂ ಯಾವುದೇ ರಾಷ್ಟ್ರೀಯ ಆರೋಗ್ಯ ಸೇವೆ ಸಂಸ್ಥೆಯ ಅಧ್ಯಕ್ಷೆಯಾದ ಮೊದಲ ಅನಿವಾಸಿ ಭಾರತೀಯ ಮಹಿಳೆ ಎನಿಸಿದ್ದಾರೆ.
ಬಾಂಬೆ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಓದಿರುವ ಮೇಘನಾ ಬ್ರಿಟನ್ನಲ್ಲಿ ನೆಲೆಸಿದ್ದಾರೆ. ಇವರು ಈಗಾಗಲೇ ಆಕ್ಸ್ಫರ್ಡ್ ಯುನಿವರ್ಸಿಟಿ ಹಾಸ್ಪಿಟಲ್ಸ್ನ ಹಂಗಾಮಿ ಸಿಇಒ ಆಗಿ 2022ರ ಜುಲೈನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಇವರಿಗೆ ಪೂರ್ಣಾವಧಿಯ ಸಿಇಒ ಆಗಿ ನೇಮಕ ಮಾಡಲಾಗಿದೆ. ಮಾರ್ಚ್ 1ರಿಂದ ಮೇಘನಾ ಪಂಡಿತ್ ಅವರ ಕಾರ್ಯಭಾರ ಆರಂಭವಾಗಲಿದೆ.