ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಂಜಿನಿಯರಿಂಗ್‌, ಕೃಷಿ ವಿಜ್ಞಾನ, ವೆಟರಿನರಿ ಸೇರಿದಂತೆ ಹಲವು ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ನಡೆಸುವ  ಸಾಮಾನ್ಯ ಪ್ರವೇಶ ಪರೀಕ್ಷೆ (CET Exam) ರಾಜ್ಯಾದ್ಯಂತ ಗುರುವಾರದಿಂದ ಪ್ರಾರಂಭವಾಗಲಿದೆ.

ಒಟ್ಟು 737 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಬಾರಿ 3,49,637 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲಿದ್ದಾರೆ.

ಈ ಕುರಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದು,  ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳು ಬಿಗಿಭದ್ರತೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಸಿಇಟಿ ಕರ್ತವ್ಯಕ್ಕೆ ಒಟ್ಟಾರೆ 20,300 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ಗುರುವಾರ ಜೀವಶಾಸ್ತ್ರ ಮತ್ತು ಗಣಿತ ಹಾಗೂ ಶುಕ್ರವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 10.30ಕ್ಕೆ ಮತ್ತು ಮಧ್ಯಾಹ್ನ 2.30ಕ್ಕೆ ಆರಂಭವಾಗುವ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಸಾಕಷ್ಟು ಮುಂಚಿತವಾಗಿಯೇ ಹಾಜರಿರಬೇಕು. ಬೆಳಗ್ಗೆ 10.40 ಮತ್ತು ಮಧ್ಯಾಹ್ನ 2.40ಕ್ಕೆ ಮೂರನೇ ಬಾರಿಗೆ ಬೆಲ್‌ ಬಾರಿಸಿದ ಬಳಿಕ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇಂಗ್ಲಿಷ್‌ ಮತ್ತು ಕನ್ನಡ ಎರಡರಲ್ಲೂ ಪ್ರಶ್ನೆಪತ್ರಿಕೆ ಇರಲಿದೆ. ಒಂದು ವೇಳೆ ಅಭ್ಯರ್ಥಿಗಳಿಗೆ ಏನಾದರೂ ಗೊಂದಲ ಉಂಟಾದಲ್ಲಿ ಇಂಗ್ಲಿಷ್‌ ಆವೃತ್ತಿಯನ್ನೇ ಅಂತಿಮವೆಂದು ಪರಿಗಣಿಸಬೇಕು. ಈ ವಿಚಾರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಪ್ರಶ್ನೆಗಳಿಗೆ ಅವಕಾಶ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೇಸಿಗೆಯ ಝಳ ಇರುವುದರಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್‌ ಕೆಡೆಟ್‌ಗಳು ಪರೀಕ್ಷೆಯು ಸುಗಮವಾಗಿ ನಡೆಯಲು ಸಹಕರಿಸಲಿದ್ದಾರೆ. ಒಂದು ಪರೀಕ್ಷಾ ಕೊಠಡಿಯಲ್ಲಿ 16 ಆವೃತ್ತಿಗಳ ಪ್ರಶ್ನೆ ಪತ್ರಿಕೆಗಳು ಇರಲಿದ್ದು, ನಕಲು ಮಾಡಲು ಅವಕಾಶ ಆಗದಂತೆ ಯೋಜನೆ ರೂಪಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು ಕೂಡ ಇರಲಿದೆ ಎಂದು ತಿಳಿಸಿದರು.

ಇದೇ 20ರಂದು ಬೆಳಗಾವಿ, ಮಂಗಳೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಬೆಳಗ್ಗೆ 11.30ರಿಂದ 12.30ರವರೆಗೆ ಕನ್ನಡ ಪರೀಕ್ಷೆ ನಡೆಯಲಿದೆ. ಈ ಸಲ ಒಟ್ಟು 1,545 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲಿದ್ದಾರೆ ಅಂತ ಮಾಹಿತಿ ನೀಡಿದರು.

ಪರೀಕ್ಷೆ ಬರೆಯೋ ವಿದ್ಯಾರ್ಥಿಗಳಿಗೆ ಕೆಲ ಮಾರ್ಗಸೂಚಿಗಳು ಹೀಗಿವೆ.
* ಪ್ರವೇಶಪತ್ರ ಮತ್ತು ಗುರುತಿನ ಪತ್ರದೊಂದಿಗೆ ಬರುವುದು ಕಡ್ಡಾಯ.
* ನೀಲಿ ಅಥವಾ ಕಪ್ಪು ಬಣ್ಣದ ಪೆನ್‌ ಮಾತ್ರ ಬಳಸತಕ್ಕದ್ದು.
* ತುಂಬು ತೋಳಿನ ಅಂಗಿ ಧರಿಸಿಕೊಂಡು ಬರುವಂತಿಲ್ಲ.
* ಮೊಬೈಲ್‌, ಬ್ಲೂಟೂತ್‌, ಟ್ಯಾಬ್ಲೆಟ್‌, ಕೈಗಡಿಯಾರ, ಕ್ಯಾಲುಕುಲೇಟರ್‌, ನೋಟ್ ಪ್ಯಾಡ್‌, ಐ-ಪಾಡ್‌, ಇಯರ್‌ ಫೋನ್‌ ಇತ್ಯಾದಿಗಳನ್ನು ತರುವಂತಿಲ್ಲ.
* ಒಮ್ಮೆ ಉತ್ತರವನ್ನು ಗುರುತು ಮಾಡಿದ ಬಳಿಕ ಅದನ್ನು ಅಳಿಸಲು ಅವಕಾಶವಿರುವುದಿಲ್ಲ.
* ಓಎಂಆರ್‌ ಶೀಟ್‌ನಲ್ಲಿ ಪ್ರವೇಶಪತ್ರ ಸಂಖ್ಯೆ, ಪ್ರಶ್ನೆಪತ್ರಿಕೆಯ ವರ್ಶನ್‌ ಕೋಡ್‌ ನಮೂದಿಸುವುದು ಕಡ್ಡಾಯ.
* ಓಎಂಆರ್‌ ಶೀಟ್‌ನ ಕೆಳಭಾಗದಲ್ಲಿ ಅಭ್ಯರ್ಥಿಗಳು ಮರೆಯದೆ ಸಹಿ ಮಾಡಬೇಕು.
* ಓಎಂಆರ್‌ ಶೀಟ್‌ನಲ್ಲಿರುವ ಟೈಮಿಂಗ್‌ ಮಾರ್ಕ್‌ ಮೇಲೆ ಏನನ್ನೂ ಬರೆಯುವುದಾಗಲಿ, ಗೀಚುವುದಾಗಲಿ ಮಾಡಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!