ಅನ್ಯ ಸಮಾಜದ ನಾಯಕರ ಏಳಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿಸಲ್ಲ: ಎಚ್.ಡಿ.ಕುಮಾರಸ್ವಾಮಿ

ಹೊಸದಿಗಂತ ವರದಿ, ಮೈಸೂರು:

ಅನ್ಯ ಸಮಾಜದ ನಾಯಕರ ಏಳಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿಸುವುದಿಲ್ಲ. ಹಾಗಾಗಿಯೇ ತಮ್ಮ ಸಿಎಂ ಹುದ್ದೆಗೆ ಅಡ್ಡಿಯಾಗುತ್ತಾರೆಂದು ದಲಿತ ನಾಯಕ ಡಾ.ಜಿ.ಪರಮೇಶ್ವರ್‌ನ್ನು  ಸೋಲಿಸಿದರು. ಕರ್ನಾಟಕ ಖಾಲಿ ಮಾಡದಿದ್ದರೆ ಬಿಜೆಪಿಗೆ ಹೋಗುತ್ತೇನೆಂದು ಕಾಂಗ್ರೆಸ್ ಹೈಕಮಾಂಡಗೆ ಬೆದರಿಕೆ ಹಾಕಿದ್ದನ್ನು ಮರೆತುಬಿಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬುಧವಾರ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಬದಲಾವಣೆ ನೋಡಿದ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭಾಷೆಯಲ್ಲಿ ಬದಲಾವಣೆ ಆಗುತ್ತಿದೆ. ಕಾಂಗ್ರೆಸ್‌ಗೆ ಈಗ ಹೆಚ್.ಡಿ.ಕುಮಾರಸ್ವಾಮಿಯೇ ಟಾರ್ಗೆಟ್ ಆಗಿದ್ದಾರೆ. ಈ ಟಾರ್ಗೆಟ್‌ಗೆ ಮಣಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.  ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲವೆಂದು ಡಿ.ಕೆ.ಶಿವಕುಮಾರ್  ಹೇಳಿದ್ದಾರೆ. ಆದರೆ ಒಕ್ಕಲಿಗರಿಗೆ ಸಿದ್ದರಾಮಯ್ಯರಿಂದ ರಕ್ಷಣೆ ಸಿಕ್ಕಿಲ್ಲ. ಸಿದ್ದರಾಮಯ್ಯರಿಂದ ಅನ್ಯಾಯವಾಗಿದೆ ಅಂತ ಡಿ.ಕೆ.ಶಿವಕುಮಾರ್ ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಯಾವತ್ತೂ ಬೇರೆ ಸಮಾಜದ ನಾಯಕರ ಬೆಳವಣಿಗೆ ಸಹಿಸುವುದಿಲ್ಲ.ಡಾ.ಜಿ.ಪರಮೇಶ್ವರ್ ಸೋಲಿಸಿದ್ದು ಯಾರು ಎಂಬುದು ಗೊತ್ತಿದೆ. ಮಲ್ಲಿಕಾರ್ಜುನ ಖರ್ಗೆ ಇದ್ದರೆ ನಮಗೆ ಸಿಎಂ ಸ್ಥಾನ ಸಿಗಲ್ಲವೆಂದು ಹೇಳಿ, ಅವರನ್ನು ದೆಹಲಿಗೆ ಕಳುಹಿಸಿದರು. ಇದರಿಂದಾಗಿ ಅವರಿಗೆ ಅನ್ಯಾಯವಾಯಿತು ಎಂದರು.

ಲೋಕಸಭೆ  ಚುನಾವಣೆಯಲ್ಲಿ ಶೇ.೮೫ರಿಂದ ೯೦ರಷ್ಟು ಒಕ್ಕಲಿಗರು ಬಿಜೆಪಿ-ಜೆಡಿಎಸ್ ಮೈತ್ರಿ ಪರವಿದ್ದಾರೆ. ಫೋನ್‌ಟ್ಯಾಪಿಂಗ್ ಮಾಡುವುದು ನನಗೆ ಗೊತ್ತಿಲ್ಲ. ನಾನೇಕೆ ಸ್ವಾಮೀಜಿ ಫೋನ್ ಟ್ಯಾಪ್ ಮಾಡಿಸಲಿ. ಅವರ ಮೇಲೆ ಅನುಮಾನ ಇದ್ದಿದ್ದರೆ, ಅವರ ಜತೆ ಯಾಕೆ ನಾನು ಅಮೆರಿಕಾಕ್ಕೆ ಹೋಗುತ್ತಿದ್ದೆ. ಯಾರು ನನಗೆ ಸರ್ಕಾರ ಬೀಳುತ್ತದೆ ಅಂತ ಹೇಳಿರಲಿಲ್ಲ. ನೀವು ಅರಾಮಾಗಿ ಹೋಗಿ ಬನ್ನಿ ಅಂತ ಹೇಳಿ ಕಳುಹಿಸಿದ್ದರು.ನಾನು ಯಾರ ಫೋನ್ ಕೂಡ ಟ್ಯಾಪ್ ಮಾಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ಹದಿನೈದು ದಿನಕ್ಕೆ ರಮೇಶ್ ಜಾರಕಿಹೊಳಿ-ಡಿ.ಕೆ. ಶಿವಕುಮಾರ ನಡುವೆ ಯಾರಿಗೋಸ್ಕರ ಕಲಹ ಆರಂಭವಾಯಿತ್ತೆoದು ಹೇಳಲಿ. ಸರ್ಕಾರ ರಚನೆಯಾದ ಆರಂಭದಲ್ಲೇ ಅವರಿಬ್ಬರ ನಡುವೆ ಕಲಹ ಯಾಕೆ ಆಯ್ತು? ನನ್ನ ಮೇಲೆ ೧೫೦ ಕೋಟಿ ರೂ.ಲಂಚದ ಆರೋಪ ಮಾಡಿದ ಶಾಸಕ ಜನಾರ್ಧನ ರೆಡ್ಡಿ ಅವರ ಬಗ್ಗೆಯೇ ತಲೆಕೆಡಿಸಿಕೊಳ್ಳದ ನಾನು, ಬೇರೆಯವರ ಫೋನ್‌ಗಳನ್ನು ಕದ್ದು ಯಾಕೆ ಕೇಳಲಿ ಎಂದು ಪ್ರಶ್ನಿಸಿದರು.

೧೯೯೬ರಲ್ಲಿ ಚುನಾವಣೆಗೆ ನಿಂತಾಗ ಪಿಜಿಆರ್ ಸಿಂಧ್ಯಾ ಅವರಿಗೆ ನಾನು ಕಪಾಳ ಮೋಕ್ಷ ಮಾಡಿದೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ರೀತಿಯ ರಾಜಕಾರಣ ಡಿ.ಕೆ.ಶಿವಕುಮಾರ್‌ಗೆ ರಕ್ತಗತವಾಗಿ ಬಂದಿದೆ. ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಿದ್ದಾರೆ. ಒಳ್ಳೆಯ ಸ್ನೇಹಿತ ಅಂತಾ ಈಗ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು. ಈ ವೇಳೆ ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!