ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ.
ಅಲ್ಲದೆ ಈ ಇಬ್ಬರೂ ಇಷ್ಟರಲ್ಲೇ ವಿಚ್ಛೇದನವನ್ನು ಪಡೆಯಲಿದ್ದಾರೆ ಎಂಬ ಊಹಾಪೋಹಗಳು ಕೂಡ ಎಲ್ಲೆಡೆ ಹಬ್ಬಿದೆ. ಇದೀಗ ಈ ಊಹಾಪೋಹಗಳಿಗೆ ಪುಷ್ಠಿ ನೀಡುವ ಘಟನೆ ನಡೆದಿದ್ದು, ಚಹಾಲ್ ಮತ್ತು ಧನಶ್ರೀ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ ನಂತರ ಧನಶ್ರೀ ಅವರೊಂದಿಗಿನ ಎಲ್ಲಾ ಫೋಟೋ ಹಾಗೂ ವಿಡಿಯೋಗಳನ್ನು ಚಹಾಲ್ ಡಿಲೀಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳಿಗೆ ಈ ಇಬ್ಬರೂ ಇಷ್ಟರಲ್ಲೇ ಬೇರಾಗಲಿದ್ದಾರೆ ಎಂಬುದು ಖಾತ್ರಿಯಾದ್ದಂತ್ತಾಗಿದೆ. ಆದಾಗ್ಯೂ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಚಹಾಲ್ ಆಗಲಿ ಅಥವಾ ಧನಶ್ರೀ ಆಗಲಿ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.
ಎನ್‌ಡಿಟಿವಿಯ ವರದಿಯ ಪ್ರಕಾರ, ವಿಚ್ಛೇದನದ ವದಂತಿಗಳು ನಿಜವೆಂದು ದಂಪತಿಗಳ ನಿಕಟ ಮೂಲಗಳು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿವೆ. ಅಲ್ಲದೆ ಈ ಇಬ್ಬರು ಪರಸ್ಪರ ಬೇರೆ ಬೇರೆಯಾಗುವುದಕ್ಕೆ ನಿಖರವಾದ ಕಾರಣಗಳು ಏನು ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಆದರೆ ದಂಪತಿಗಳು ಪ್ರತ್ಯೇಕ ಜೀವನವನ್ನು ನಡೆಸಲು ನಿರ್ಧರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.