ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಎಸ್‌ಆರ್‌ಟಿಸಿ ಹಾಗೂ ಇತರ ಮೂರು ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಏರಿಕೆ ಇಂದು ಮಧ್ಯರಾತ್ರಿಯಿಂದಲೇ ಅನ್ವಯವಾಗಲಿದೆ.
ಈ ವಿಚಾರವಾಗಿ ರಾಜ್ಯ ಸರ್ಕಾರ ಶನಿವಾರ ಮಾಧ್ಯಾಹ್ನ ಅಧಿಕೃತ ಆದೇಶ ಹೊರಡಿಸಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿ ಬಸ್ ಟಿಕೆಟ್ ದರ ಶೇ 15ರಷ್ಟು ಹೆಚ್ಚಳವಾಗಲಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2015ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ 2020ರಲ್ಲಿ ಪ್ರಯಾಣದ ದರ ಪರಿಷ್ಕರಣೆ ಮಾಡಲಾಗಿರುತ್ತದೆ. ಪ್ರಯಾಣ ದರ ಪರಿಷ್ಕರಣೆಗಾಗಿ ನಿಗಮದ ಸಿಬ್ಬಂದಿ ವೇತನ ವೆಚ್ಚ, ಇಂಧನ ವೆಚ್ಚ ಹಾಗೂ ನಿರ್ವಹಣಾ ವೆಚ್ಚವನ್ನು ಪರಿಗಣಿಸಲಾಗುತ್ತಿದೆ.
ಪ್ರಸ್ತುತ 9.56 ಕೋಟಿ ರೂ. ಮೊತ್ತವನ್ನು ಹೆಚ್ಚುವರಿಯಾಗಿ ವೆಚ್ಚ ಮಾಡುತ್ತಿದ್ದು, ಸಿಬ್ಬಂದಿ ವೆಚ್ಚ ಸೇರಿ ವಾರ್ಷಿಕವಾಗಿ 3650.00 ಕೋಟಿ ರೂ. ನಿಗಮಕ್ಕೆ ಹೊರೆಯಾಗುತ್ತಿದೆ. ಆದ್ದರಿಂದ, ಶೇ 15ರಷ್ಟು ಪ್ರಯಾಣದ ದರ ಹೆಚ್ಚಳ ಮಾಡಲು ಸಭೆಯು ನಿರ್ಣಯಿಸಿ, ಅದರಂತೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.