ಇಬ್ರಾಹಿಂಗೆ ಜೆಡಿಎಸ್‍ನಲ್ಲಿ ಜೋಕರ್ ಪಾತ್ರ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜೆಡಿಎಸ್ ಪಕ್ಷದ ರಾಜ್ಯ ಅಧ್ಯಕ್ಷ ಇಬ್ರಾಹಿಂ ಅವರಿಗೆ ಆ ಪಕ್ಷದಲ್ಲಿ ಜೋಕರ್ ಪಾತ್ರ ಕೊಡಲಾಗಿದೆ ಎಂದು ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜೆಡಿಎಸ್‍ನಲ್ಲಿ ಯಾವ ಮುಖಂಡರಿದ್ದಾರೆ. ಇಬ್ರಾಹಿಂ ಅವರು ಅಧ್ಯಕ್ಷರಾಗಿದ್ದರೂ ಅವರ ಮಾತು ನಡೆಯುತ್ತದೆಯೇ? ಎಂದು ಪ್ರಶ್ನಿಸಿದರು. ಹಿಂದೆ ಎಚ್.ಕೆ.ಕುಮಾರಸ್ವಾಮಿ ಎಂಬ ದಲಿತರನ್ನು ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದ್ದರು. ನೈಜ ಅಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ವಿವರಿಸಿದರು.

ಕಾಂಗ್ರೆಸ್- ಜೆಡಿಎಸ್‍ನದು ಚುನಾವಣೆಗಾಗಿ ಯಾತ್ರೆಯೇ ಹೊರತು ಸಂಘಟನೆಗಾಗಿ ಯಾತ್ರೆ ಅಲ್ಲ. ನಮ್ಮ ಪಕ್ಷ ಚುನಾವಣೆ ಆದ ಮರುದಿನದಿಂದಲೇ ಸಂಘಟನಾ ಕಾರ್ಯ ನಡೆಸುತ್ತದೆ. ಚುನಾವಣೆ ನಂತರವೂ ಅದು ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತದೆ ಎಂದು ತಿಳಿಸಿದರು. ಹಾಸನದಲ್ಲಿ ಜೆಡಿಎಸ್ ಮನೆಗೇ ಬೆಂಕಿ ಬಿದ್ದಿದೆ. ಮನೆಯಲ್ಲೇ 9 ಜನರು ಚುನಾವಣಾ ಕಣದಲ್ಲಿ ಇರುವ ಕಾರಣ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನವಗ್ರಹ ಯಾತ್ರೆ ಎಂದಿದ್ದಾರೆ. ಜೆಡಿಎಸ್‍ನವರದು ಕುಟುಂಬ ರಾಜಕಾರಣ ಎಂದು ಟೀಕಿಸಿದರು. ಕಾಂಗ್ರೆಸ್- ಜೆಡಿಎಸ್ ಪಕ್ಷಗಳಲ್ಲಿ ಒಂದು ಕುಟುಂಬವೇ ಪಕ್ಷವನ್ನು ನಡೆಸುತ್ತಿವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಯೊಬ್ಬ ದಲಿತ ಮುಖಂಡನನ್ನು ಸರ್ವನಾಶ ಮಾಡಲಾಗಿದೆ. ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ, ಇವತ್ತೂ ಹೈಕಮಾಂಡ್ ಎಂದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರನ್ನೇ ಹೇಳುತ್ತಾರೆ ಎಂದು ತಿಳಿಸಿದರು. ಖರ್ಗೆಯವರಿಗೆ ನಾಮಕಾವಾಸ್ತೆ ಹುದ್ದೆ ಕೊಟ್ಟಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ ತೊರೆದು ಅನೇಕ ಜನರು ಬಿಜೆಪಿ ಸೇರುತ್ತಿದ್ದಾರೆ ಎಂದ ಅವರು, ಮುಂದೆ ಇನ್ನಷ್ಟು ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!