– ಸಂತೋಷ ರಾಯ್ಕರ
ಮುಂಡಗೋಡ: ತಲೆಗೆ ಪಾಗೋಟ್, ಕೈಯಲ್ಲಿ ಪೂಜಿಸುವ ಕೋಲು, ‘ಚಾಂಗಭಲಾ. ಚಾಂಗಭಲಾ’ ಎನ್ನುತ್ತ ಹೆಜ್ಜೆ ಹಾಕುವ ಶ್ವೇತವಸ್ತ್ರಧಾರಿಗಳು, ಡೋಲು ನಾದಕ್ಕೆ ಪ್ರದಕ್ಷಿಣಾಕಾರದಲ್ಲಿ ಕುಣಿಯುತ್ತ ಇಲ್ಲಿನ ಗೌಳಿ ಸಮುದಾಯ ದಸರಾ ಹಬ್ಬ ಆಚರಿಸುವುದು ವಿಶೇಷ.
ಹಬ್ಬದ ವಿಶೇಷತೆ ಕುರಿತು ಮಾಹಿತಿ ನೀಡಿದ ರಾಮಚಂದ್ರ ಶಿಂಧೆ, ತಾಲೂಕಿನ ಉಗ್ಗಿನಕೇರಿ, ಬಡ್ಡಿಗೇರಿ, ಮೈನಳ್ಳಿ, ಕಳಕಿಕಾರೆ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೆಲೆಸಿರುವ ಗೌಳಿಗರು ಹಬ್ಬದ ಸಂತೆಯಲ್ಲಿ ಪರಸ್ಪರ ಭೇಟಿಯಾಗುವ ವಿವಿಧ ಗ್ರಾಮಗಳ ಗೌಳಿಗರು, ಶಿಲ್ಲಂಗಾನ್ ನಡೆಯುವ ಬಗ್ಗೆ ಬೇರೆ ಊರಿನ ಗೌಳಿಗರಿಗೆ ತಿಳಿಸುತ್ತಾರೆ. ಅಲ್ಲಿಯೇ ತಾಂಬೂಲ (ಎಲೆ, ಅಡಿಕೆಬೆಟ್ಟ) ನೀಡಿ ಹಬ್ಬಕ್ಕೆ ಆಮಂತ್ರಿಸುತ್ತಾರೆ. ತಾಂಬೂಲ ಸ್ವೀಕರಿಸಿದ ವ್ಯಕ್ತಿ ತನ್ನ ವಾಡೆಯಲ್ಲಿ ವಿಷಯ ತಿಳಿಸಿದಾಗ, ಆ ಊರಿನ ಗ್ರಾಮಸ್ಥರು, ಶಿಲ್ಲಂಗಾನ್ ನಡೆಯುವ ಊರಿಗೆ ಪ್ರಯಾಣಿಸುತ್ತಾರೆ.
ಗಜ ಕುಣಿತದ ಆಕರ್ಷಣೆ
ಮಜ್ಜಿಗೆ ತುಂಬಿರುವ ಮಡಿಕೆಯಲ್ಲಿ ಕಾಯಿ ಇಟ್ಟುಕೊಂಡು ಶಿಲ್ಲಂಗಾನ್ ನಡೆಯುವ ಗ್ರಾಮಕ್ಕೆ ಹೋಗುತ್ತಾರೆ. ಊರು ತಲುಪುತ್ತಿದ್ದಂತೆ ವಾದ್ಯ ಸಂಗೀತದ ಮೂಲಕ ಅವರನ್ನು ಸ್ವಾಗತಿಸಿ, ಮಜ್ಜಿಗೆ ತುಂಬಿದ ಮಡಿಕೆಗಳನ್ನು ದೇವರ ಮುಂದೆ ಇಟ್ಟು ಪೂಜಿಸುತ್ತಾರೆ. ನಂತರ ಸಾಂಪ್ರದಾಯಿಕ ಗಜ ಕುಣಿತದ ವೇಷ ಧರಿಸಿ ಪುರುಷರು ಕುಣಿಯುತ್ತಾರೆ. ಹಬ್ಬದ ದಿನ ಬೆಳಗಿನ ಜಾವದವರೆಗೂ ಗಜ ಕುಣಿತ ನಡೆಯುತ್ತದೆ ಎಂದು ಹಿರಿಯ ಮುಖಂಡ ದೂಳು ಕೊಕರೆ ತಿಳಿಸಿದರು.
ಸಾಮರಸ್ಯ ಬೆಸೆಯುವ ಹಬ್ಬ
ಕೆಲವರಿಗೆ ಮೈಮೇಲೆ ದೇವರು ಬರುತ್ತದೆ. ದೇವರ ಸಾನ್ನಿಧ್ಯದಲ್ಲಿ ಹೇಳಿಕೆ ನೀಡುತ್ತಾರೆ. ಮನೆತನದವರು ಪರಸ್ಪರ ಮೈಮೇಲೆ ಮಜ್ಜಿಗೆ ಸುರಿದುಕೊಂಡು ಸ್ನಾನ ಮಾಡುತ್ತಾರೆ. ಎಲ್ಲರೂ ಒಂದೇ ಎಂಬ ಭಾವನೆ ಈ ದಸರಾ ಆಚರಣೆಯ ಹಿಂದಿದೆ. ಸಂಜೆ ಗ್ರಾಮದ ಹೊರವಲಯದ ಬನ್ನಿ ಗಿಡದಲ್ಲಿ ಸೋನಾ ಕತ್ತರಿಸಿ ತಂದು ಮನೆಯಲ್ಲಿ ಇಟ್ಟು ಪೂಜಿಸುತ್ತಾರೆ ಎಂದು ಗೌಳಿ ಯುವ ಮುಖಂಡ ಸಿದ್ದು ತೊರತ್ ಹಬ್ಬದ ಆಚರಣೆ ಕುರಿತು ವಿವರಿಸಿದರು.
ಕುಟುಂಬದಿಂದ ಹರಕೆ
ಉಗ್ಗಿನ ಕೇರಿ ಗ್ರಾಮಸ್ಥ ಕೆ.ಬಿ. ಶಿಂಧೆ ಹಬ್ಬದ ಕುರಿತು ಹೇಳುತ್ತ, ನವರಾತ್ರಿಯ ಒಂಬತ್ತೂ ದಿನಗಳು ಮನೆಯ ದೇವರಿಗೆ ಕುಟುಂಬದ ಒಂದಿಬ್ಬರು ಸದಸ್ಯರು ಹರಕೆ ಹೊರುತ್ತಾರೆ. ಈ ದಿನಗಳಲ್ಲಿ ದೇವರ ಹರಕೆ ಹೊತ್ತವರು ಮನೆಯಲ್ಲಿ ಮಾಡಿದ ಅಥವಾ ಬೇರೆ ಮನೆಯ ಊಟ ಮಾಡುವುದಿಲ್ಲ. ಕೇವಲ ಹಾಲು, ಮಜ್ಜಿಗೆ ಸೇವಿಸುತ್ತಾರೆ. ಕಾಲಿಗೆ ಚಪ್ಪಲಿ ಧರಿಸದೆ ಸಂಚರಿಸುತ್ತಾರೆ. ಪ್ರತಿ ದಿನ ಬೆಳಗ್ಗೆ ರಾತ್ರಿ ತಪ್ಪದೆ ಪೂಜೆ ಸಲ್ಲಿಸಲಾಗುತ್ತದೆ.