Thursday, September 29, 2022

Latest Posts

ಮಡಿಕೇರಿ| ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ: ಪಕ್ಷದಲ್ಲಿ ಭಿನ್ನಮತ ಸ್ಫೋಟ

ಹೊಸದಿಗಂತ ವರದಿ ಮಡಿಕೇರಿ:

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ದಿಢೀರ್ ಬದಲಾವಣೆ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅನಂತ ಕುಮಾರ್ ಅವರನ್ನು ತೆರೆವುಗೊಳಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಒಮ್ಮೆಯೂ ಭೇಟಿ ನೀಡದ ವ್ಯಕ್ತಿಯನ್ನು ಇದೀಗ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನೂರಾರು ಕಾರ್ಯಕರ್ತರು, ಅ‌ನಂತಕುಮಾರ್ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ದಿಢೀರ್ ಬದಲಾವಣೆ ಮಾಡಿರುವ ಕ್ರಮವನ್ನು ವಿರೋಧಿಸಿ ಬುಧವಾರ ಶನಿವಾರಸಂತೆ ಸಮೀಪದ ಹಂಡ್ಲಿ ಬೀಕಳ್ಳಿಯ ಅನಂತ್ ಕುಮಾರ್ ನಿವಾಸದಲ್ಲಿ ಕರೆದಿದ್ದ ಸಭೆಯಲ್ಲಿ ಅನಂತ್ ಕುಮಾರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ದ ಅಸಮಾಧಾನ ಹೊರಹಾಕಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅನಂತ್ ಕುಮಾರ್ ಅವರು, ಪಕ್ಷ ನನಗೆ ಅನೇಕ ಜವಬ್ದಾರಿಗಳನ್ನು ನೀಡಿದೆ. ಅದನ್ನು ಸರಿಯಾಗಿ ನಿಭಾಯಿಸಿದ್ದೇನೆ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದ ನಂತರ ಕಾಂಗ್ರೆಸ್ ಮತದಾರರ ಸಂಖ್ಯೆಯೂ ಹೆಚ್ಚಿದೆ. ಇದೀಗ ಪಕ್ಷಕ್ಕೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಿದ್ದೇನೆ. ಆದರೆ ನನ್ನನ್ನು ಕೇಳದೆ ಏಕಾಏಕಿ ಅಧ್ಯಕ್ಷರನ್ನು ಬದಲಾಯಿಸಿದ್ದಾರೆ.ನಾನು ಪಕ್ಷ ಸಂಘಟನೆ ಮಾಡಿದ್ದು, ಕುಶಾಲನಗರದಲ್ಲಿ ಪಕ್ಷದ ಕಚೇರಿ ತೆರೆದದ್ದು, ವೀರಶೈವ ಹಿತರಕ್ಷಣಾ ಸಮಿತಿ ಅಧ್ಯಕ್ಷನಾಗಿದ್ದು, ಅಲ್ಪಸಂಖ್ಯಾತರ ಸಾಮಾನ್ಯ ಕಾರ್ಯಕರ್ತನನ್ನು ನಗರಾಧ್ಯಕ್ಷ ಮಾಡಿದ್ದು ತಪ್ಪಾ ಎಂದು ಪ್ರಶ್ನಿಸಿದರಲ್ಲದೆ, ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಿದ್ದೇನೆ. ಆದರೆ ಇದೀಗ ಈ ರೀತಿಯ ನೋವು ನೀಡಿರುವುದು ಬೇಸರದ ಸಂಗತಿ ಎಂದರು.

ಕಾರ್ಯಾಧ್ಯಕ್ಷರಿಂದ ಧಮ್ಕಿ: ಇಂದು ನಾನು ಕರೆದಿರುವ ಸಭೆಗೆ ತೆರಳದಂತೆ ಕಾಂಗ್ರೆಸ್ ಕಾರ್ಯಾಧ್ಯಕ್ಷರು ಕಾರ್ಯಕರ್ತರಿಗೆ ಧಮ್ಕಿ ಹಾಕಿದ್ದು, ಅವರೇನು ಸರ್ವಾಧಿಕಾರಿಯೇ ಎಂದು ಗುಡುಗಿದ ಅನಂತಕುಮಾರ್, ಕಾಂಗ್ರೆಸ್ ಇವರ ಆಟವನ್ನು ನೋಡಿಕೊಂಡಿರಬೇಕೇ? ಇದೆ ರೀತಿ ಮುಂದುವರೆದರೆ ಕಾಂಗ್ರೆಸ್’ನಲ್ಲಿ ಯಾವ ಕಾರ್ಯಕರ್ತರೂ ಇರುವುದಿಲ್ಲ ಮತದಾರರೂ ಇರುವುದಿಲ್ಲ. ಇತರೆ ಪಕ್ಷದವರು ಸುಲಭವಾಗಿ ಗೆಲ್ಲಲು ಅವಕಾಶ ಮಾಡಿಕೊಡುತ್ತಿರುವುದು ಇಂತಹ ಕಾರ್ಯಾಧ್ಯಕ್ಷರು ಹಾಗೂ ಕೆಲ ಕಾಂಗ್ರೆಸ್ ನಾಯಕರುಗಳೇ ಎಂದು ಅನಂತಕುಮಾರ್ ಕಿಡಿಕಾರಿದರು.
ಪಕ್ಷದ‌ ಸಿದ್ಧಾಂತ ಸರಿಯಾಗಿದೆ. ಆದರೆ ಜಿಲ್ಲಾ ಕಾರ್ಯಾಧ್ಯಕ್ಷರ ಹಾಗೂ ಕೆಲ ನಾಯಕರ ನಡೆ ಬದಲಾಗಬೇಕಿದೆ. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಅವರು ಅಸಮಾಧಾನ ಹೊರಹಾಕಿದರು.

ಹೊಸ ಮನೆಯಲ್ಲಿ ಗೂಬೆ: ಅನಂತ್ ಕುಮಾರ್ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಕಾರ್ಯಕರ್ತರನ್ನು ನಿರ್ಮಿಸಿದ್ದಾರೆ. ಉತ್ತಮ ಮನೆ ನಿರ್ಮಾಣ ಮಾಡಿದ ನಂತರ ಆ ಮನೆಯಲ್ಲಿ ಗೂಬೆಯನ್ನು ಕೂರಿಸಿದರೆ ಆ ಮನೆಗೆ ಯಾರು ಬರುತ್ತಾರೆ? ಇದು ಎಚ್ಚರಿಕೆ; ತಕ್ಷಣ ಬದಲಾವಣೆ ತರಬೇಕು ಎಂದು ಕುಶಾಲನಗರ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆಶ್ರಫ್ ನುಡಿದರು.

ಕಾಂಗ್ರೆಸ್ ಜಿಲ್ಲೆಯಲ್ಲಿ ಗಟ್ಟಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ನಿಶ್ಚಿತವಿತ್ತು. ಆದರೆ ಈ ರೀತಿ ಇರುವಾಗ ಜಿಲ್ಲೆಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ, ಬೇರೆ ಜಿಲ್ಲೆಯವರಿಗೆ ಟಿಕೆಟ್ ನೀಡುವ ಮೂಲಕ ಮತ್ತೆ ಬೇರೆ ಪಕ್ಷದವರಿಗೆ ಗೆಲುವು ಸಾಧಿಸಲು ಅವಕಾಶ ಮಾಡಿಕೊಡಲು ಕೆಲ ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆ ಈ ಸಂದರ್ಭದಲ್ಲಿ ಸರಿಯಲ್ಲ. ಇದಕ್ಕೆ ನನ್ನ ವಿರೋಧವಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೊಕೇಶ್ ಟೀಕಿಸಿದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಡಿಸಿಸಿ ಕಾರ್ಯದರ್ಶಿ ಕಾಂತರಾಜ್, ಜನಾರ್ಧನ್, ಸದಸ್ಯರಾದ ಹೂವಯ್ಯ, ಶರತ್ ಶೇಖರ್, ವೀರೇಂದ್ರ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಹೆಚ್.ಬಿ. ಜಯಮ್ಮ, ಸಂದೀಪ್, ಕಾಂಗ್ರೆಸ್ ಜಿಲ್ಲಾ ವಕ್ತಾರ ಸುರೇಶ್, ರಫಿಕ್, ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆ ಗೀತಾ ಧರ್ಮಪ್ಪ, ಕೊಡ್ಲಿಪೇಟೆ ಗ್ರಾ.ಪಂ.ಅಧ್ಯಕ್ಷ ಶೋಬಿತ್ ಗೌಡ., ರಂಗಸ್ವಾಮಿ, ಮಹ್ಮದ್ ಕನ್ನಾ ಮುಂತಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!