ಮುಖ್ಯಮಂತ್ರಿ ಬದಲಾವಣೆ ಕಾಂಗ್ರೆಸ್ ಸೃಷ್ಟಿ, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್

ಹೊಸದಿಗಂತ ವರದಿ ಮೈಸೂರು:
ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಮಂಗಳವಾರ ರಾತ್ರಿ ಮೈಸೂರಿನಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ ಟ್ವೀಟ್ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. 2023ರಲ್ಲೂ ಅವರ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂದರು.

ಕಾಂಗ್ರೆಸ್ ನವರಿಗೆ ಬೇರೆ ಕೆಲಸ ಇಲ್ಲ. ಯಾವ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬಸವರಾಜ್ ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯ, ಸರ್ಕಾರದ ಸಾಧನೆ ಸಹಿಸಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ಈ ರೀತಿ ಸುಳ್ಳು ಸುದ್ದಿ ಹರಿಬಿಟ್ಟಿದೆ ಎಂದು ಕಿಡಿಕಾರಿದರು. ಸಿದ್ದರಾಮೋತ್ಸವ ಆದಮೇಲೆ ಕಾಂಗ್ರೆಸ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅದನ್ನು ಹಾರಿಸಿಕೊಳ್ಳಲು ಮೂರನೇ ಮುಖ್ಯಮಂತ್ರಿ, 40% ಕಮಿಷನ್ ಎಂಬ ಸುಳ್ಳು ಪ್ರಚಾರವನ್ನು ಕಾಂಗ್ರೆಸ್ ಮಾಡುತ್ತಿದೆ. ವಿಷಯಾಂತರ, ಸುಳ್ಳು ಸುದ್ದಿ ಹಬ್ಬಿಸುವಲ್ಲಿ ಕಾಂಗ್ರೆಸ್ ನಂಬರ್ ಒನ್ ಎಂದರು. ಮಳೆ ಅನಾಹುತದ ಸ್ಥಳಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ ತಕ್ಷಣ ಪರಿಹಾರ ಬಿಡುಗಡೆಗೆ ಸಿಎಂ ಸೂಚಿಸಿದ್ದಾರೆ. ಅಮಿತ್ ಶಾ ಅವರು ಕೂಡ ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಮುಖ್ಯಮಂತ್ರಿ ಎಲ್ಲರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

40% ಕಮಿಷನ್ ಬಗ್ಗೆ ಆರೋಪಿಸುವ ಕಾಂಗ್ರೆಸ್ ಒಂದೇಒಂದನ್ನು ಸಾಬೀತುಪಡಿಸಿಲ್ಲ. ಪಕ್ಷ, ಸರ್ಕಾರದಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲ, ಇದು ಕಾಂಗ್ರೆಸ್ ನ ಸುಳ್ಳು ಪ್ರಚಾರ. ಮುಖ್ಯಮಂತ್ರಿ ಅವರ ಬಗ್ಗೆ ಅಮಿತ್ ಶಾ ಅವರು ಯಾವುದೇ ಬೇಸರ ವ್ಯಕ್ತಪಡಿಸಿಲ್ಲ. ಎಲ್ಲೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಪ್ರಧಾನಮಂತ್ರಿಗಳು ಕೂಡ ಮೆಚ್ಚುಗೆ ಮುಖ್ಯಮಂತ್ರಿ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಸಿದ್ದರಾಮೋತ್ಸವದಲ್ಲಿ ಎಷ್ಟು ಕುರ್ಚಿ ಹಾಕಿದ್ದರು, ಎಷ್ಟು ಜನ ಬಂದರು ಎಂದು ಗೊತ್ತಿದೆ. ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಕಾಂಗ್ರೆಸ್ ಆಸೆ ಈಡೇರಲ್ಲ. ಬಿಜೆಪಿಯಲ್ಲಿ ಯಾವುದೇ ಸಮಸ್ಯೆ, ಗೊಂದಲ ಇಲ್ಲ. ಸುಳ್ಳು ಸುದ್ದಿ ಸೃಷ್ಟಿ ಮಾಡುವಲ್ಲಿ ಕಾಂಗ್ರೆಸ್ ನಂಬರ್ ಒನ್ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಕಾಂಗ್ರೆಸ್ ಗೆ ಬಂದಿದ್ದು ಯಾವಾಗ? ಕಾಂಗ್ರೆಸ್ ಗೆ ಅವರ ಕೊಡುಗೆ ಏನು? ಗಂಟೇಗಟ್ಟಲೇ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೂಲೆಗುಂಪು ಮಾಡಿ, ಪರಮೇಶ್ ಅವರನ್ನು ಸೋಲಿಸಿದರು. ಸೋನಿಯಾಗಾಂಧಿ, ಇಂದಿರಾಗಾಂಧಿ ಬಗ್ಗೆ ಟೀಕೆ ಮಾಡಿದರು. ಕಾಂಗ್ರೆಸ್ ಗೆ ಬಂದು ಅಧಿಕಾರ ಅನುಭವಿಸಿ ಈಗ ಮತ್ತೆ ಮುಖ್ಯಮಂತ್ರಿ ಆಗಲು ಅವಣಿಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ಹಾರಿಸದೆ ಈ ರೀತಿ ವಿಷಯಾಂತರ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!