Friday, June 2, 2023

Latest Posts

ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ತುರ್ತು ಸೇವೆಗೆ ಐಎಂಎ ವಿರೋಧ: ಕಾಯ್ದೆ ಹಿಂಪಡೆಯಲು ಒತ್ತಾಯ

ಹೊಸದಿಗಂತ ವರದಿ ಮಡಿಕೇರಿ:

ಖಾಸಗಿ ಆಸ್ಪತ್ರೆಗಳೂ ಎಲ್ಲರಿಗೂ ತುರ್ತು ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡಬೇಕೆಂದು ರಾಜಸ್ಥಾನ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕೊಡಗು ಘಟಕ ವಿರೋಧ ವ್ಯಕ್ತಪಡಿಸಿದೆ.
ರಾಜಸ್ಥಾನ ಸರಕಾರದ ಈ ಆದೇಶ ಖಾಸಗಿ ಆಸ್ಪತ್ರೆಗಳ ಅಸ್ತಿತ್ವಕ್ಕೆ ಮಾರಕವಾಗಿದ್ದು, ಈ ಕಾನೂನನ್ನು ಕೂಡಲೇ ಹಿಂಪಡೆಯಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ರಾಜಸ್ಥಾನ ಸರ್ಕಾರ ಇತ್ತೀಚೆಗೆ ಕಾನೂನು ಹೊರಡಿಸಿಸರ್ಕಾರಿ ಆಸ್ಪತ್ರೆಗಳಂತೆಯೇ ಖಾಸಗಿ ಆಸ್ಪತ್ರೆಗಳು ಕೂಡಾ ತುರ್ತು ವೈದ್ಯಕೀಯ ಸೇವೆಯನ್ನು ಉಚಿತವಾಗಿ ರೋಗಿಗಳಿಗೆ ನೀಡಬೇಕೆಂದು ಸೂಚಿಸಿದೆ. ಇದರಿಂದ ಖಾಸಗಿ ಆಸ್ಪತ್ರೆಗಳ ಅಸ್ತಿತ್ವಕ್ಕೇ ಧಕ್ಕೆ ಬಂದಂತಾಗಿದೆ. ಯಾವುದೆಲ್ಲಾ ತುರ್ತು ಆರೋಗ್ಯ ಸೇವೆಯಡಿ ಬರುತ್ತದೆ ಎಂಬ ಸ್ಪಷ್ಟತೆಯೂ ಇಲ್ಲವಾಗಿದೆ. ಹೀಗಿರುವಾಗ ಖಾಸಗಿ ಆಸ್ಪತ್ರೆಗಳ ಸ್ಥಾಪನೆಯ ಉದ್ದೇಶವೇ ಈ ಕಾಯಿದೆಯಿಂದ ವಿಫಲವಾಗಲಿದೆ. ರಾಜ್ಯ ಸರ್ಕಾರವೊಂದು ಈ ರೀತಿಯ ಕಾಯಿದೆ ಮೂಲಕ ಖಾಸಗಿ ಆಸ್ಪತ್ರೆಗಳ ಮೇಲೆ ಹಿಡಿತ ಸ್ಥಾಪಿಸಲು ಮುಂದಾಗಿರುವುದು ದುರದೃಷ್ಟಕರ. ಖಾಸಗಿ ಆಸ್ಪತ್ರೆಗಳ ಆರೋಗ್ಯಕರ ವ್ಯವಸ್ಥೆಯೇ ಇದರಿಂದ ಸಮಸ್ಯೆಗೊಳಪಡಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಖಾಸಗಿ ಆಸ್ಪತ್ರೆಗಳು ಮಹತ್ವದ ಪಾತ್ರ ವಹಿಸಿವೆ. ಹೀಗಿರುವಾಗ ಸರ್ಕಾರವೊಂದು ಖಾಸಗಿ ಆಸ್ಪತ್ರೆಗಳ ನಿರ್ವಹಣೆಗೆ ಧಕ್ಕೆಯಾಗುವಂತೆ ಹೊಸ ರೀತಿಯ ಕಾನೂನು ಜಾರಿಗೊಳಿಸಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಈ ಕಾನೂನನ್ನು ಹಿಂಪಡೆಯಬೇಕೆಂದು ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರಾಜಸ್ಥಾನದಲ್ಲಿ ಈ ಕಾನೂನನ್ನು ಜಾರಿಗೊಳಿಸಲು ಸಮ್ಮತಿಸದ ಖಾಸಗಿ ಆಸ್ಪತ್ರೆಗಳ ವೈದ್ಯರ ವಿರುದ್ಧ ಪೊಲೀಸ್ ಕ್ರಮ ಕೈಗೊಂಡಿರುವುದನ್ನೂ ಸಂಘ ಖಂಡಿಸಿದೆ.

ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಅಧ್ಯಕ್ಷ ಡಾ.ಶ್ಯಾಮ್ ಅಪ್ಪಣ್ಣ, ಗೌರವ ಕಾರ್ಯದರ್ಶಿ ಡಾ.ಸಿ.ಆರ್.ಪ್ರಶಾಂತ್, ಹಿರಿಯ ಸದಸ್ಯರಾದ ಡಾ.ಮೋಹನ್ ಅಪ್ಪಾಜಿ, ಡಾ. ಎಂ.ಎ.ದೇವಯ್ಯ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.
ರಾಜಸ್ಥಾನ ಸರ್ಕಾರದ ಹೊಸ ಕಾಯಿದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆಯನ್ನೂ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!