ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ವಿಗ್ರಹಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ (Asia Book of Records) ರಾಷ್ಟ್ರೀಯ ಮಾನ್ಯತೆ ದೊರೆತಿದೆ.
ರಾಮನಗರದ ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ಗೌಡಗೆರೆಯ 60 ಅಡಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹಕ್ಕೆ ಈ ಮಾನ್ಯತೆ ದೊರಕಿದೆ.
ದೇವಾಲಯದ ಆವರಣದಲ್ಲಿ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಅವರಿಗೆ ಸಂಸ್ಥೆಯ ಅಧಿಕಾರಿಗಳು ಎರಡೂ ಪ್ರಶಸ್ತಿಗಳನ್ನ ಪ್ರದಾನ ಮಾಡಿದ್ದಾರೆ. ಕ್ಷೇತ್ರದಲ್ಲಿರುವ ತಾಯಿ ಚಾಮುಂಡೇಶ್ವರಿಯ ಪಂಚಲೋಹ ವಿಗ್ರಹ ಬೇರೆಲ್ಲೂ ಇಲ್ಲ ಎಂಬ ಮಾತುಗಳಿದ್ದವು. ಈಗ ಅಧಿಕೃತವಾಗಿ ದಾಖಲಾಗಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.
ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರ ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ತಾಯಿ ಚಾಮುಂಡೇಶ್ವರಿಯ ಪಂಚಲೋಹ ವಿಗ್ರಹ ನಾಡಿನ ಗಡಿ ದಾಟಿ ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ.
ನೆಲಮಟ್ಟದಿಂದ 60 ಅಡಿ ಎತ್ತರವಿರುವ ತಾಯಿ ವಿಗ್ರಹ ಭಕ್ತರಿಂದ ಸಂಗ್ರಹಿಸಿದ ಪಂಚಲೋಹಗಳಿಂದ ನಿರ್ಮಿಸಿರುವುದು ವಿಶೇಷ. 35 ಸಾವಿರ ಕೆ.ಜಿ ತೂಕದ ಈ ಪಂಚಲೋಹ ವಿಗ್ರಹ 2021ರ ಆಗಸ್ಟ್ 8ರಂದು ಲೋಕಾರ್ಪಣೆಗೊಂಡಿತ್ತು. ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರ ಭಕ್ತರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.