ಹೊಸದಿಗಂತ ವರದಿ ಸೋಮವಾರಪೇಟೆ:
ಸೋಮವಾರಪೇಟೆಯ ನಂದಿನ ಕ್ಷೀರ ಕೇಂದ್ರದಲ್ಲಿ ಹಾಲು, ಮೊಸರು, ಮಜ್ಜಿಗೆಯನ್ನು ನಿಗದಿತ ದರಕ್ಕಿಂತ ಹೆಚ್ಚಿನ ರೇಟ್ಗೆ ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಹಕರು ದೂರಿದ್ದಾರೆ.
ಈ ಕೇಂದ್ರದಲ್ಲಿ ಮಜ್ಜಿಗೆ ಖರೀದಿ ಮಾಡಿದ್ದು, ಪ್ಯಾಕೆಟ್ ಮೇಲೆ ಒಂಬತ್ತು ರೂಪಾಯಿ ಎಂದು ನಮೂದಿಸಲಾಗಿದೆ. ಆದರೆ ಹತ್ತು ರೂಪಾಯಿ ಹಣ ನೀಡುವಂತೆ ಕೇಳಿದ್ದಾರೆ. ಒಂದು ರೂಪಾಯಿ ಹೆಚ್ಚುವರಿ ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಫ್ರಿಡ್ಜ್ನಲ್ಲಿ ಇಡುತ್ತೇವೆ. ಕರೆಂಟ್ ಬಿಲ್ ಹೆಚ್ಚು ಬರುತ್ತದೆ. ಹಾಗಾಗಿ ಒಂದು ರೂಪಾಯಿ ಹೆಚ್ಚಿಗೆ ಪಡೆಯುತ್ತೇವೆ ಎಂದು ಅಲ್ಲಿನ ಸಿಬ್ಬಂದಿ ಉತ್ತರ ನೀಡಿದ್ದಾರೆ ಎಂದು ಗ್ರಾಹಕರೋರ್ವರು ಆರೋಪಿಸಿದ್ದಾರೆ.
ಕೆಎಂಎಫ್ ಕೇಂದ್ರಗಳಲ್ಲಿ ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿಗೆ ಹಣ ಪಡೆಯುವಂತಿಲ್ಲ. ಆದರೂ ಎಲ್ಲ ಉತ್ಪನ್ನಗಳ ಮೇಲೆ ಒಂದು ರೂಪಾಯಿ ಹೆಚ್ಚಿಗೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಗ್ರಾಹಕರು ಆಗ್ರಹಿಸಿದ್ದಾರೆ.
ಗ್ರಾಹಕರ ಸೇವೆಗೆಂದಿರುವ ಈ ಕೇಂದ್ರ ಬಹುತೇಕ ದಿನಗಳಲ್ಲಿ ಮದ್ಯಾಹ್ನದ ವೇಳೆ ಮುಚ್ಚಿರುವುದರಿಂದ ಮದ್ಯಾಹ್ನದ ನಂತರ ಹಾಲು ಬೇಕಾದವರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ವಾರ್ಷಿಕ ಕೊಟ್ಯಾಂತ ರೂಪಾಯಿ ಲಾಭಗಳಿಸುವ ಕೆಎಂಎಫ್ ಇಲ್ಲಿನ ಕ್ಷೀರ ಕೇಂದ್ರಕ್ಕೆ ಒಂದು ನಾಮ ಪಲಕವನ್ನು ಅಳವಡಿಸಲಾರದಷ್ಟು ನಿರ್ಲಕ್ಷ್ಯ ತೋರಿದ್ದಾರೆ.