ಛತ್ತೀಸ್‌ಗಢದಲ್ಲಿ ಸನಾತನ ಧರ್ಮಕ್ಕೆ ಸಾವಿರಕ್ಕೂ ಅಧಿಕ ಮಂದಿಯ ಘರ್ ವಾಪ್ಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ರಾಯ್ಪುರ: ಛತ್ತೀಸ್‌ಗಢ ರಾಜ್ಯದಲ್ಲಿ 1250 ಮಂದಿ ಸನಾತನ ಧರ್ಮಕ್ಕೆ ಮರಳಿದ್ದಾರೆ. ರಾಜ್ಯದ ಮಹಾಸಮುಂಡ್ ಜಿಲ್ಲೆಯ ಕಟಾಂಗ್‌ಪಾಲಿ ಗ್ರಾಮದಲ್ಲಿ ನಡೆದ ವಿಶ್ವ ಕಲ್ಯಾಣ ಮಹಾಯಜ್ಞದಲ್ಲಿ ಇದು ನಡೆದಿದೆ.

ಆರ್ಯ ಪ್ರತಿನಿಧಿ ಸಮಾಜವು ಮಹಾಯಜ್ಞವನ್ನು ಏರ್ಪಡಿಸಿತ್ತು. ಬಿಜೆಪಿ ರಾಜ್ಯ ಕಾರ್ಯದರ್ಶಿ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರು ಸನಾತನ ಧರ್ಮಕ್ಕೆ ಮರಳಿದವರ ಪಾದಗಳನ್ನು ಗಂಗಾಜಲದಿಂದ ತೊಳೆಯುವ ಮೂಲಕ ಜನರನ್ನು ಅವರ ಮೂಲ ಧರ್ಮಕ್ಕೆ ತರುವ ಕಾರ್ಯ ಮಾಡಿದ್ದಾರೆ.

ಮತಾಂತರಕ್ಕೆ ಬಲಿಯಾದ ಪ್ರತಿಯೊಬ್ಬ ವ್ಯಕ್ತಿಯೂ ಸನಾತನ ಧರ್ಮಕ್ಕೆ ಮರಳುವವರೆಗೆ ಘರ್ ವಾಪ್ಸಿ ಅಭಿಯಾನ ಅನಿರ್ದಿಷ್ಟಾವಧಿಗೆ ಮುಂದುವರಿಯಲಿದೆ ಎಂದು ಜುದೇವ್ ಹೇಳಿದ್ದಾರೆ. ಮತಾಂತರಕ್ಕೆ ತಳ್ಳಲ್ಪಡುತ್ತಿರುವ ಹಿಂದುಗಳ ವಿರುದ್ಧ ಧ್ವನಿಯೆತ್ತುವಂತೆ ಅವರು ಸಭಿಕರನ್ನು ಒತ್ತಾಯಿಸಿದ್ದಾರೆ.

ಹಿಂದುತ್ವವನ್ನು ಕಾಪಾಡುವುದು ತಮ್ಮ ಜೀವನದ ಏಕೈಕ ಸಂಕಲ್ಪವಾಗಿದೆ. ಹಿಂದು ಧರ್ಮಕ್ಕೆ ವಾಪಸ್ಸಾದ ಹೆಚ್ಚಿನ ಕುಟುಂಬಗಳು ಬಸ್ನಾ ಸಾರಾಯಿಪಾಲಿನಿಂದ ಬಂದವು. ಹಿಂದು ಧರ್ಮಕ್ಕೆ ವಾಪಸ್ಸಾದ ಕುಟುಂಬಗಳಲ್ಲಿನ ಪೂರ್ವಜರು ಸುಮಾರು ಮೂರು ತಲೆಮಾರುಗಳ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರು. ಅವರೆಲ್ಲ ಆ ಸಮಯದಲ್ಲಿ ಸಾಕಷ್ಟು ಬಡವರಾಗಿದ್ದರು ಮತ್ತು ಮಿಷನರಿಗಳಿಂದ ಸ್ವಲ್ಪ ಆರ್ಥಿಕ ಸಹಾಯವನ್ನು ಪಡೆದ ನಂತರ ಮತ್ತು ಕಾಯಿಲೆಗಳ ಚಿಕಿತ್ಸೆಯಲ್ಲಿ ಸಹಾಯವನ್ನು ಪಡೆಯುವ ಪ್ರಲೋಭನೆಯಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು ಎಂದು ಜುದೇವ್ ತಿಳಿಸಿದ್ದಾರೆ.

ನನ್ನ ತಂದೆಯ ಮರಣದ ನಂತರ ನಾನು ಈ ಕೆಲಸವನ್ನು ಮುಂದುವರಿಸುತ್ತಿದ್ದೇನೆ. ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಒಡಿಶಾದಂತಹ ರಾಜ್ಯಗಳಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ 10 ಸಾವಿರಕ್ಕೂ ಹೆಚ್ಚು ಜನರು ಸನಾತನ ಧರ್ಮಕ್ಕೆ ಮರಳಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ನಮ್ಮ ಈ ಅಭಿಯಾನವನ್ನು ಸುಮಾರು ಎರಡು ವರ್ಷಗಳ ಕಾಲ ನಿಲ್ಲಿಸಲಾಯಿತು. ಈಗ ಮತ್ತೆ ವೇಗ ಹೆಚ್ಚಿಸುತ್ತಿದ್ದೇವೆ. ಇದು ಪವಿತ್ರ ಕೆಲಸ, ದೇಶ ಕಟ್ಟುವ ಕೆಲಸ. ಇದು ನನ್ನ ತಂದೆಯಿಂದ ಪ್ರಾರಂಭವಾಯಿತು ಮತ್ತು ಅದರೊಂದಿಗೆ ಸಂಬಂಧ ಹೊಂದಲು ನನಗೆ ತುಂಬಾ ಹೆಮ್ಮೆಯಾಗುತ್ತದೆ ಎಂದು ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಹೇಳಿದ್ದಾರೆ.

ಸ್ವಾಮಿ ದೇವ್ ನಂದ್, ಆಚಾರ್ಯ ಅಂಶುದೇವ್ ಆರ್ಯ, ರಾಜೇಂದ್ರ ಭಾಯಿ ಸಾಹೇಬ್, ನಂದಕುಮಾರ್ ಸಾಯಿ, ಪಂಡಿತ್ ಋಷಿರಾಜ್ ಆರ್ಯ, ಪಂಡಿತ್ ಪಂಕಜ್ ಭಾರದ್ವಾಜ್, ರಾಮಚಂದ್ರ ಅಗರ್ವಾಲ್ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಛತ್ತೀಸ್‌ಗಢದ ಪಥಲ್‌ಗಾಂವ್ ನ ಖುಂತಪಾನಿಯಲ್ಲಿ 400 ಕುಟುಂಬಗಳ 1200 ಜನರು ಈಗಾಗಲೇ ಹಿಂದು ಧರ್ಮಕ್ಕೆ ವಾಪಸ್ಸಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!