ಹೊಸದಿಗಂತ ವರದಿ,ಅಂಕೋಲಾ:
ಪಶು ಸಂಗೋಪನಾ ಸಚಿವ ಪ್ರಭು ಬಿ ಚವ್ಹಾಣ ಅವರು ಗೋಕರ್ಣದ ಪುರಾಣ ಪ್ರಸಿದ್ಧ ಮಹಾಗಣಪತಿ ಮತ್ತು ಮಹಾಬಲೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದ ಗೋಶಾಲೆಗೆ ಭೇಟಿ ನೀಡಿದ ಸಚಿವರು ನಂದಿಗೆ ಆಹಾರ ನೀಡಿ ಗೋಕರ್ಣ ಗೋಶಾಲೆಯ ವಾತಾವರಣದ ಕುರಿತು ಸಂತಸ ವ್ಯಕ್ತಪಡಿಸಿದರು.
ಅಶೋಕೆಯಲ್ಲಿರುವ ಶ್ರೀ ರಾಮಚಂದ್ರಪುರ ಶಾಖಾ ಮಠಕ್ಕೆ ಸಚಿವ ಚವ್ಹಾಣ ಭೇಟಿ ನೀಡಿದರು.
ಗೋ ರಕ್ಷಣೆಗೆ ಬದ್ಧ
ಗೋವುಗಳ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು ಗೋ ಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ 10 ಸಾವಿರಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಲಾಗಿದೆ, ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುವವರ ಮೇಲೆ ಯಾವುದೇ ಮುಲಾಜಿಲ್ಲದೇ ಪ್ರಕರಣ ದಾಖಲಿಸಲು ಸೂಚಿಸಲಾಗಿದ್ದು ಈಗಾಗಲೇ ಹಲವಾರು ಪ್ರಕರಣಗಳನ್ನು ದಾಖಲಿಸಿ ಗೋವುಗಳನ್ನು ರಕ್ಷಣೆ ಮಾಡುವ ಕಾರ್ಯವನ್ನು ಮಾಡಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ
ಗೋಕರ್ಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ ಸದ್ಯದಲ್ಲೇ 400 ಪಶು ವೈದ್ಯರ ಖಾಲಿ ಹುದ್ದೆಗಳನ್ನು ಬರ್ತಿ ಮಾಡಲಾಗುವುದು ಇಲಾಖೆಯಿಂದ 1 ಸಾವಿರ ಪಶು ವೈದ್ಯರ ಹುದ್ದೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು 400 ಹುದ್ದೆಗಳನ್ನು ತುಂಬಲು ಮಂಜೂರಾತಿ ನೀಡಲಾಗಿದ್ದು ಶೀಘ್ರದಲ್ಲಿ ಅಗತ್ಯ ಇರುವಲ್ಲಿ ವೈದ್ಯರ ಹುದ್ದೆ ತುಂಬಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಕ್ರಮಗಳನ್ನು ಕೈಗೊಳ್ಳುವುದು ಎಂದ ಅವರು ಪ್ರತಿ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಗೋಶಾಲೆ ನಿರ್ಮಾಣ ಕಾರ್ಯ ಆರಂಭವಾಗಲಿದ್ದು ಅವಶ್ಯಕ ಗೋಮಾಳ ಪ್ರದೇಶದಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗುವುದು ಎಂದರು.
ದೇಶದ ಇತಿಹಾಸದಲ್ಲೇ ಪ್ರಥಮವಾಗಿ ಪಶು ಸಹಾಯವಾಣಿ ವ್ಯವಸ್ಥೆಯನ್ನು ರಾಜ್ಯದಲ್ಲಿ ಕಲ್ಪಿಸಲಾಗಿದೆ, ಪಶುಗಳಿಗಾಗಿ ಪಶು ಸಂಜೀವಿನಿ ಎಂಬ ಆಂಬ್ಯುಲೆನ್ಸ್ ವ್ಯವಸ್ಥೆ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು ಯೋಜನೆ ಅಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಪಶುಗಳಿಗಾಗಿ ಆಂಬ್ಯುಲೆನ್ಸ್ ಗಳ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಪ್ರಭು ಚವ್ಹಾಣ ತಿಳಿಸಿದರು.