Friday, June 2, 2023

Latest Posts

ವಂಚನೆ ಪ್ರಕರಣ: ತಮಿಳುನಾಡು ಮಾಜಿ ಸಚಿವ ಹಾಸನದಲ್ಲಿ ಅರೆಸ್ಟ್

ಹೊಸದಿಗಂತ ವರದಿ,ಹಾಸನ:

ವಂಚನೆ ಆರೋಪದಡಿ ತಮಿಳುನಾಡಿನ ಎಐಡಿಎಂಕೆ ಪಕ್ಷದ ಮಾಜಿ ಸಚಿವ ರಾಜೇಂದ್ರ ಬಾಲಾಜಿ ಎಂಬುವರನ್ನು ನಗರದಲ್ಲಿ ಬುಧವಾರ ಮಧ್ಯಾಹ್ನ ಅರೆಸ್ಟ್ ಮಾಡಲಾಗಿದೆ.
ಖಚಿತ ಮಾಹಿತಿ ಮೇರೆಗೆ ಆರೋಪಿಯ ಬೆನ್ನಟ್ಟಿದ ನೆರೆಯ ರಾಜ್ಯದ ಪೊಲೀಸರು, ಸಿನಿಮೀಯ ರೀತಿಯಲ್ಲಿ ಕಾರನ್ನು ಅಡ್ಡಗಟ್ಟಿ ಸುತ್ತುವರಿದು ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪವೇನು:
ರಾಜೇಂದ್ರ ಬಾಲಾಜಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಸುಮಾರು ೩ ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿ ಮೋಸ ಮಾಡಿದ್ದ.
ಬಾಲಾಜಿ ಮತ್ತು ಈತನ ನಾಲ್ವರು ಸಹಾಯಕರು ಸೇರಿ ಸರ್ಕಾರಿ ಕೆಲಸ ಕೊಡುತ್ತೇವೆ ಎಂದು ಅನೇಕರಿಂದ ೩ ಕೋಟಿಗೂ ಅಧಿಕ ಹಣವನ್ನು ವಸೂಲಿ ಮಾಡಿ ಪಂಗನಾಮ ಹಾಕಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ವಿಚಾರಣೆ ನಡೆದು ಅಂತಿಮವಾಗಿ ಕೋರ್ಟ್ ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿತ್ತು.
ಇದರ ಬೆನ್ನಲ್ಲೇ ಪ್ರಮುಖ ಆರೋಪಿ ಬಾಲಾಜಿ ತಲೆ ಮರೆಸಿಕೊಂಡಿದ್ದ.ಈ ಹಿನ್ನೆಲೆಯಲ್ಲಿ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಕಳೆದ ೨೦ ದಿನಗಳಿಂದ ಬಂದನಕ್ಕಾಗಿ ಬಲೆ ಬೀಸಿದ್ದರು. ಎಲ್ಲಾ ರೀತಿಯ ಹುಡುಕಾಟ ನಡೆಸಿದ್ದರು. ಇದಕ್ಕಾಗಿ ವಿಶೇಷ ತಂಡಗಳನ್ನೂ ರಚನೆ ಮಾಡಲಾಗಿತ್ತು.
ಅಲ್ಲಿಂದ ಇಲ್ಲಿಗೆ:
ಪೊಲೀಸರು ತಮ್ಮನ್ನು ಹುಡುಕುತ್ತಿದ್ದಾರೆ ಎಂಬುದನ್ನು ತಿಳಿದೋ ಏನೋ ಬಾಲಾಜಿ ಅಲ್ಲಿಂದ ಹಾಸನಕ್ಕೆ ಆಗಮಿಸಿ ಕಳೆದ ಕೆಲವು ದಿನಗಳಿಂದ ಇಲ್ಲೇ ಸುತ್ತಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ನೆರೆಯ ರಾಜ್ಯದ ಪೊಲೀಸರೂ ಸಹ ಎರಡು ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿ ಆರೋಪಿಯನ್ನು ಬೆನ್ನಟ್ಟಿದ್ದರು. ಜೊತೆಗೆ ಹಾಸನ ಜಿಲ್ಲಾ ಪೊಲೀಸರಿಗೂ ಮಾಹಿತಿ ರವಾನೆ ಮಾಡಿದ್ದರು.
ಸಿನಿಮೀಯ ರೀತಿ ಬಂಧನ:
ಮಾಜಿ ಸಚಿವ ನಗರದ ವಾರ್ತಾಇಲಾಖೆ ಮುಂಭಾಗದ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿದ ಪೊಲೀಸರು, ಬಾಲಾಜಿ ಇದ್ದ ಕಾರನ್ನು ಅಡ್ಡಗಟ್ಟಿ ಸುತ್ತುವರಿದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಾಲಾಜಿ ಯನ್ನು ಕಾರಿನಿಂದ ಇಳಿಸಿ ವಶಕ್ಕೆ ಪಡೆಯುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ, ರಾಜೇಂದ್ರ ಬಾಲಾಜಿ ಬಂಧನ ಸಂಬಂಧ ನಮ್ಮ ಪೊಲೀಸರ ಸಹಾಯ ಕೇಳಿದ್ದರು. ಅದರಂತೆ ಸಹಕರಿಸಲಾಗಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!