ಹೊಸದಿಗಂತ ವರದಿ, ವಿಜಯನಗರ:
ಹಣ ಡಬ್ಲಿಂಗ್ ಹಾಗೂ ಸರ್ಕಾರದ ಸಬ್ಸಿಡಿ ಕೊಡಿಸುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸಿರುವ ಆರೋಪದಡಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಪ್ರಿಯಾಂಕಾ ಜೈನ್ ಸೇರಿದಂತೆ ಮೂವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪ್ರಿಯಾಂಕಾ ಜೈನ್(೩೩), ಸಂಘದ ಫೀಲ್ಡ್ ವರ್ಕರ್ ವೆಂಕಟೇಶ್ (೪೫), ಸಂಘದ ಕಾರ್ಯದರ್ಶಿ ಎಚ್.ಎಂ.ಆನಂದ(೨೯) ಬಂಧಿತರು.
ಜನರು ಸ್ಕೀಮ್‌ನಲ್ಲಿ ಕಟ್ಟಿದ್ದ ಹಣವನ್ನು ೭೦ ದಿನಗಳಲ್ಲಿ ದ್ವಿಗುಣಗೊಳಿಸುವುದು, ಸರ್ಕಾರದಿಂದ ಸಬ್ಸಿಡಿ ಸಹಿತ ಸಾಲ ಕೊಡಿಸುವುದಾಗಿ ಹೇಳಿ ಹೊಸಪೇಟೆ ಸೇರಿದಂತೆ ಸುತ್ತಮುತ್ತಲಿನ ೩೦೦ ಜನರಿಂದ ೩ ಕೋಟಿ ರೂ. ಕಟ್ಟಿಸಿಕೊಂಡಿದ್ದರು.ಬಳಿಕ ಹಣ ಹಿಂದಿರುಗಿಸದೇ, ದ್ವಿಗುಣಗೊಳಿಸದೇ, ಸರ್ಕಾರದಿಂದ ಸಬ್ಸಿಡಿ ಸಾಲ ಸೌಲಭ್ಯ ಒದಗಿಸದೆವಂಚಿಸಿದ್ದಾರೆ ಎಂದು ಹೊಸಪೇಟೆ ನಿವಾಸಿ ಶೋಭಾ ಎಂಬುವವರು ನಗರದ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಡಾ.ಶ್ರೀಹರಿಬಾಬು ಮಾಹಿತಿ ನೀಡಿದರು.