ಚೀತಾ ನಮ್ಮ ಅತಿಥಿಗಳು, ತಾಳ್ಮೆ ಇರಲಿ, ನೋಡೋಕೆ ಮುಗಿ ಬೀಳಬೇಡಿ: ದೇಶವಾಸಿಗಳಿಗೆ ಪ್ರಧಾನಿ ಮೋದಿ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪ್ರಧಾನಿ ಮೋದಿ ಜನ್ಮ ದಿನ ಸಂಭ್ರಮ ಒಂದೆಡೆಯಾದರೆ, ಮತ್ತೊಂದಡೆ ಇಂದು ನಮೀಬಿಯಾದಿಂದ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಎಂಟು ಚೀತಾಗಳು ಆಗಮಿಸಿವೆ .

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಪಾರ್ಕ್‌ಗೆ ಪ್ರಧಾನಿ ನರೇಂದ್ರ ಮೋದಿ ಚೀತಾ ಗಳನ್ನು ಬಿಟ್ಟರು. ಈ ವೇಳೆ ಮೋದಿ ನಮೀಬಿಯಾ ಸರ್ಕಾರವನ್ನು ನೆನಪು ಮಾಡಿಕೊಂಡು ಧನ್ಯವಾದ ಸಲ್ಲಿಸಿದರು.

ಇನ್ನು ವೇಳೆ ದೇಶವಾಸಿಗಳಲ್ಲಿ ಪ್ರಧಾನಿ ಮೋದಿ ವಿಶೇಷ ಮನವಿಯೊಂದನ್ನು ಮಾಡಿದ್ದು, ಚೀತಾಗಳು ಮತ್ತೆ ಕುನೋದಲ್ಲಿ ಓಡಿದರೆ ಇಲ್ಲಿ ಜೀವವೈವಿಧ್ಯ ಹೆಚ್ಚುತ್ತದೆ. ಅಭಿವೃದ್ಧಿಯ ಅವಕಾಶಗಳು ಇಲ್ಲಿ ಉದ್ಭವಿಸುತ್ತವೆ. ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಸದ್ಯ ಈ ಚೀತಾಗಳ ಬಗ್ಗೆ ದೇಶದ ಜನರಲ್ಲಿ ಕುತೂಹಲಗಳಿರಬಹುದು. ಆದರೆ, ತಾಳ್ಮೆಯಿಂದ ಇರಲಿ. ಇವುಗಳನ್ನು ನೋಡೋಕು ಮುಗಿ ಬೀಳಬೇಡಿ ಎಂದು ಮನವಿ ಮಾಡಿದರು.

ಈ ಚೀತಾಗಳು ನಮ್ಮ ದೇಶದ ಅತಿಥಿಗಳು. ಅವುಗಳಿಗೆ ಈ ಪ್ರದೇಶದ ಬಗ್ಗೆ ಹೆಚ್ಚಾಗಿ ಏನೂ ತಿಳಿದಿಲ್ಲ. ಕುನೋ ರಾಷ್ಟ್ರೀಯ ಪಾರ್ಕ್‌ ಅದಕ್ಕೆ ತನ್ನ ಮನೆ ಅಂದುಕೊಳ್ಳಬೇಕು. ಅಲ್ಲಿಯವರೆಗೂ ನಾವು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಚೀತಾಗಳನ್ನು ನೀವು ನೋಡಲು ಇನ್ನಷ್ಟು ತಿಂಗಳುಗಳ ಕಾಲ ಕಾಯಬೇಕು ಎಂದು ತಿಳಿಸಿದ್ದಾರೆ.

ನಮೀಬಿಯಾದಿಂದ ಬಂತು 8 ಚೀತಾಗಳು
ನಮೀಬಿಯಾದಿಂದ ಬಂದಿರುವ 8 ಚೀತಾಗಳ ಪೈಕಿ ಐದು ಚೀತಾಗಳು ಹೆಣ್ಣು ಹಾಗೂ ಮೂರು ಚೀತಾಗಳು ಗಂಡು. 2 ವರ್ಷದ ಹೆಣ್ಣು ಚೀತಾ ಅತ್ಯಂತ ಕಿರಿಯವಳು. 5.5 ವರ್ಷದ ಎರಡು ಗಂಡು ಚೀತಾ (ಸಹೋದರರು) ಅತ್ಯಂತ ಹಿರಿಯವರಾಗಿದ್ದಾರೆ. ಎರಡು ಗಂಡು ಚೀತಾಗಳನ್ನು ನಮೀಬಿಯಾದ ಖಾಸಗಿ ಮೀಸಲು ಪ್ರದೇಶ ಒಟಿಜಾವಾರಂಗೂದಲ್ಲಿ ಸೆರೆ ಹಿಡಿಯಲಾಗಿತ್ತು. ಇನ್ನು 4.5 ವರ್ಷದ ಇನ್ನೊಂದು ಗಂಡು ಚೀತಾ, ಎರಿಂಡಿ ಪ್ರೈವೇಟ್‌ ಗೇಮ್‌ ರಿಸರ್ವ್‌ ಪ್ರದೇಶದಲ್ಲಿ ಜನಿಸಿದ್ದಾಗಿದೆ. ಸಾಮಾನ್ಯವಾಗಿ ಚೀತಾಗಳು ಜೀವಿತಾವಧಿ 12 ವರ್ಷಗಳಾಗಿವೆ.

ಇನ್ನು ಅತ್ಯಂತ ಕಿರಿಯವಳಾಗಿರುವ 2 ವರ್ಷದ ಹೆಣ್ಣು ಚೀತಾವನ್ನು, ಗೋಬಾಬಿಯಲ್ಲಿನ ಸಿಹಿ ನೀರ ಪ್ರದೇಶದಲ್ಲಿ ತನ್ನ ಸಹೋದರ ಜೊತೆ ಇದ್ದಾಗ ಸೆರೆ ಹಿಡಿಯಲಾಗಿತ್ತು. ಇನ್ನು 2.5 ವರ್ಷ ಹೆಣ್ಣು ಚೀತಾ 2020ರ ಏಪ್ರಿಲ್‌ನಲ್ಲಿ ಎರಿಂಡಿ ಪ್ರೈವೇಟ್‌ ಗೇಮ್‌ ರಿಸರ್ವ್‌ನಲ್ಲಿ ಜನಿಸಿತ್ತು. 3 ರಿಂದ 4 ವರ್ಷದ ಅಂದಾಜಿನ ಇನ್ನೊಂದು ಚೀತಾವನ್ನು ಸಿಸಿಎಫ್‌ನ ಫಾರ್ಮ್‌ನಲ್ಲಿ ಟ್ರ್ಯಾಪ್‌ ಕೇಜ್‌ನ ಮೂಲಕ ಹಿಡಿಯಲಾಗಿತ್ತು. ತಲಾ 5 ವರ್ಷದ ಇನ್ನೆರಡು ಹೆಣ್ಣು ಚೀತಾಗಳ ಪೈಕಿ ಒಂದನ್ನು 2017ರಲ್ಲಿ ನಮೀಬಿಯಾದ ಗೋಬಾಬಿಯ ಫಾರ್ಮ್‌ನಲ್ಲಿ ಹಿಡಿದಿದ್ದರೆ, ಕಮನ್‌ಜಾಬ್‌ ಎನ್ನುವ ಹಳ್ಳಿಯಿಂದ ಇನ್ನೊಂದು ಚೀತಾವನ್ನು ಸೆರೆ ಮಾಡಲಾಗಿತ್ತು.

70 ವರ್ಷಗಳ ಬಳಿಕ ಚೀತಾ
ಭಾರತದ ಸರ್ಕಾರ 1952ರಲ್ಲಿ ಅಧಿಕೃತವಾಗಿ ದೇಶದಲ್ಲಿ ಚೀತಾದ ಸಂತತಿ ಕೊನೆಯಾಗಿದೆ ಎಂದು ಘೋಷಣೆ ಮಾಡಿತ್ತು. ಇದಾದ 70 ವರ್ಷಗಳ ಬಳಿಕ ಚೀತಾ ನಮ್ಮ ದೇಶಕ್ಕೆ ಕಾಲಿಟ್ಟಿದೆ. ನಮೀಬಿಯಾದ ಹೋಸೆಯಾ ಕುಟಾಕೋ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ವಿಶೇಷ ವಿಮಾನ 747 ಜಂಬೋ ಜೆಟ್‌ ಮೂಲಕ ಈ ಚೀತಾಗಳು ಜೈಪುರಕ್ಕೆ ಬಂದಿದ್ದವು. ಅದಾದ ಬಳಿಕ ಕುನೋ ರಾಷ್ಟ್ರೀಯ ಪಾರ್ಕ್‌ಗೆ ಹೆಲಿಕಾಪ್ಟರ್‌ ಮೂಲಕ ತರಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!