ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಚೆನ್ನೈ -ಕೊರೊಮಂಡೆಲ್ ಎಕ್ಸ್ಪ್ರೆಸ್ ರೈಲು ಹಾಗೂ ಸರಕು ಸಾಗಾಣೆ ರೈಲು ಮುಖಾಮುಖಿ ಡಿಕ್ಕಿಯಾಗಿದೆ. 12841 ಎಕ್ಸ್ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿದೆ. ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದು, 179 ಅಧಿಕ ಮಂದಿ ಮಂದಿ ಗಾಯಗೊಂಡಿದ್ದಾರೆ.
ಪ್ರಯಾಣಿಕರನ್ನು ಬಾಲಸೋರ್ ವೈದ್ಯಕೀಯ ಕಾಲೇಜು, ಸೊರೊದಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಗೋಪಾಲಪುರ ಮತ್ತು ಖಾಂತಪಾದದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಎಕ್ಸ್ಪ್ರೆಸ್ ರೈಲಿನ 8 ಬೋಗಿಗಳು ಹಳಿ ತಪ್ಪಿದೆ. ಮಾಹಿತಿ ತಿಳಿದ ತಕ್ಷಣ ರೈಲ್ವೇ ಪೊಲೀಸರು, ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಬಾಲಾಸೋರ್ ಜಿಲ್ಲಾಧಿಕಾರಿ ಸ್ಥಳಕ್ಕೆ ಧಾವಿಸಿದ್ದು, ಅಗತ್ಯ ಕ್ರಮಕ್ಕೆ ಸೂಚಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಯುತ್ತಿದೆ. ಹಲವು ಬೋಗಿಗಳು ಹಳಿ ತಪ್ಪಿದ ಕಾರಣ ರಕ್ಷಣಾ ಕಾರ್ಯ ನಿರಂತರವಾಗಿ ಸಾಗಿದೆ.
ಶಾಲಿಮಾರ್ ರೈಲು ನಿಲ್ದಾಣದಿಂದ ಇಂದು 3.30pm ಕ್ಕೆ ಪ್ರಯಾಣ ಆರಂಭಿಸಿದ ಕೊರೊಮಂಡಲ್ ಎಕ್ಸ್ಪ್ರೆಸ್ ರೈಲು, ಸಂಜೆ 6.30ರ ವೇಳೆಗೆ ಒಡಿಶಾದ ಬಾಲಾಸೋರ್ ಜಿಲ್ಲೆಗೆ ತಲುಪಿದೆ. ನಾಳೆ ಸಂಜೆ 4.30ಕ್ಕೆ ಈ ರೈಲು ಚೆನ್ನೈನ ಡಾ. ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣ ತಲುಪಬೇಕಿತ್ತು. ಆದರೆ ಸಂಜೆ 7.30ರ ಸುಮಾರಿಗೆ ಬಹನಗ ರೈಲು ನಿಲ್ದಾಣದ ಸಮೀಪದಲ್ಲಿ ಅಪಘಾತಕ್ಕೀಡಾಗಿದೆ.