ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ್ ಹಾಗೂ ವಿಜ್ಞಾನ ಭಾರತಿಯ ರಾಷ್ಟ್ರೀಯ ಸಂಘಟನಾ ಮಂತ್ರಿಯಾಗಿದ್ದ ಮುತ್ಸದ್ದಿ ಜಯಂತ್ ಸಹಸ್ರಬುದ್ಧೆ ಅವರು ಮುಂಬೈಯಲ್ಲಿ ಶುಕ್ರವಾರ ಮುಂಜಾನೆ ನಿಧನರಾದರು. ಅವರಿಗೆ 66 ವರ್ಷ ಪ್ರಾಯವಾಗಿತ್ತು.
ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಅಸಾಮಾನ್ಯ ಕೊಡುಗೆ ನೀಡಿರುವ ಅವರು , ವಿಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆಗಳ ಬಗ್ಗೆ ದೇಶ ವಿದೇಶಗಳಲ್ಲಿ ಅರಿವು ಮೂಡಿಸಿದ್ದರು.ಅಲ್ಲದೆ ವಿಜ್ಞಾನ ಕ್ಷೇತ್ರದಲ್ಲಿನ ಅನೇಕ ಅಜ್ಞಾತ ವಿಚಾರಗಳನ್ನು ಬೆಳಕಿಗೆ ತಂದಿದ್ದು, ಭಾರತೀಯ ಕಾಲಗಣನೆ ಮತ್ತು ಭಾರತೀಯ ವಿಜ್ಞಾನ ಕ್ಷೇತ್ರದ ಬಗ್ಗೆ ಅವರು ಅದ್ಭುತವಾದ ಜ್ಞಾನ ಹೊಂದಿದ್ದರು.
1966 ರ ಏ.17 ರಂದು ಜನಿಸಿದ ಅವರು ಮುಂಬೈ ವಿಶ್ವವಿದ್ಯಾಲಯದಲ್ಲಿ ಬಿಟೆಕ್ ಪದವಿ ಪಡೆದ ಬಳಿಕ ವಿಶ್ವವಿಖ್ಯಾತ ಭಾರತ್ ಅಟೋಮಿಕ್ ರೀಸರ್ಚ್ ಸೆಂಟರ್(ಬಾರ್ಕ್)ನಲ್ಲಿ ಕೆಲಸ ಮಾಡಿದ್ದರು. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ರಾಷ್ಟ್ರಸೇವೆಗೆ ತಮ್ಮನ್ನು ಮುಡಿಪಾಗಿಡಲು ಬಯಸಿದ ಅವರು ಸಂಘದ ವಿವಿಧ ಜವಾಬಾದ್ದಾರಿಗಳನ್ನು ನಿರ್ವಹಿಸಿದರು. ಗೋವಾ ವಿಭಾಗ ಪ್ರಚಾರಕ್, ಕೊಂಕಣ್ ಪ್ರಾಂತದ ಪ್ರಾಂತ ಪ್ರಚಾರಕ್ ಆಗಿ 2009 ರಿಂದ ವಿಜ್ಞಾನ ಭಾರತೀಯ ಸಂಘಟನಾ ಮಂತ್ರಿಯಾಗಿ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ಮತ್ತು ಭಾರತೀಯ ವಿಜ್ಞಾನಿಗಳ ಅಪ್ರತಿಮ ಸಾಧನೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದರು.
ಜಯಂತ್ ಸಹಸ್ರಬುದ್ಧೆ ಅವರಿಗೆ ಈ ಹಿಂದೆ ದಿಲ್ಲಿಯಲ್ಲಿ ಅಪಘಾತವೊಂದರ ವೇಳೆ ಗಾಯಗಳಾಗಿತ್ತು. ಅನಂತರ ಅವರು ಸುದೀರ್ಘಕಾಲ ಚಿಕಿತ್ಸೆಯಲ್ಲಿದ್ದರು. ಅವರ ಪಾರ್ಥೀವ ಶರೀರವನ್ನು ಮುಂಬೈಯ ಯಶವಂತ್ ಭವನದಲ್ಲಿರಿಸಿ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಅಪರಾಹ್ನ 4 ಗಂಟೆಗೆ ಅವರ ಪಾರ್ಥೀವ ಶರೀರದ ಅಂತಿಮಯಾತ್ರೆ ನಡೆದು ಮುಂಬೈಯ ಶಿವಾಜಿ ಪಾರ್ಕ್‌ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.
ಸಹಸ್ರಬುದ್ಧೆ ಅವರ ನಿಧನಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಭಾರತೀಯ ವೈಜ್ಞಾನಿಕ ಪರಂಪರೆಗೆ ಹೊಸ ದಿಕ್ಕು ನೀಡಿದ ಸಹಸ್ರಬುದ್ಧೆ ಅವರು, ರಾಷ್ಟ್ರ ಮತ್ತು ಸಮಾಜ ಸೇವೆಗೆ ತಮ್ಮನ್ನು ತಾವು ಸಂಪೂರ್ಣ ಸಮರ್ಪಿಸಿಕೊಂಡವರು ಎಂದು ಬಣ್ಣಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ಚೌಹಾಣ್ ಪ್ರಾರ್ಥಿಸಿದ್ದಾರೆ. ಮಧ್ಯಪ್ರದೇಶದ ಗೃಹಸಚಿವ ನರೋತ್ತಮ್ ಮಿಶ್ರಾ ಅವರು ಕೂಡ ಸಹಸ್ರಬುದ್ಧೆಯವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.