ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಾರೋಗ್ಯದಿಂದ ನಿನ್ನೆ(ಜು.18) ನಿಧನರಾದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅಂತಿಮ ಸಂಸ್ಕಾರವನ್ನು ಹಾಸನ ಜಿಲ್ಲೆಯ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಅಂತಿಮ ದರ್ಶನ ಪಡೆಯಲು ಬೆಂಗಳೂರು ಮತ್ತು ಹೊಳೆನರಸೀಪುರದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ಇಂದು ಬೆಂಗಳೂರಿನಲ್ಲಿ ಅಂತಿಮ ದರ್ಶನ
ದೇವೇಗೌಡರ ಪದ್ಮನಾಭನಗರ ನಿವಾಸದ ಸಮೀಪವಿರುವ ವಾಜಪೇಯಿ ಕ್ರೀಡಾಂಗಣದಲ್ಲಿ ಇಂದು ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 11.05 ಕ್ಕೆ ಬೆಂಗಳೂರಿನ ವಾಜಪೇಯಿ ಕ್ರೀಡಾಂಗಣದಿಂದ ಹಾಸನ ಜಿಲ್ಲೆಯ ಹೊಳೆನರಸೀಪುರದತ್ತ ಚೆನ್ನಮ್ಮ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಸಲಾಗುತ್ತದೆ.
ನಾಳೆ ಹೊಳೆನರಸೀಪುರದಲ್ಲಿ ಅಂತಿಮ ದರ್ಶನ
ನಾಳೆ (ಜುಲೈ 20, ಸೋಮವಾರ) ಬೆಳಿಗ್ಗೆ 7 ರಿಂದ 9.30 ರವರೆಗೆ ಹೊಳೆನರಸೀಪುರದ ಹೆಚ್.ಡಿ. ರೇವಣ್ಣ ನಿವಾಸದಲ್ಲಿ ಸಾರ್ವಜನಿಕರು ಮತ್ತು ಸ್ಥಳೀಯ ಜನರಿಗೆ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಗಿದ ಬೆಳಿಗ್ಗೆ 10 ಗಂಟೆಗೆ ಹೊಳೆನರಸೀಪುರದಿಂದ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ರವಾನಿಸಲಾಗುತ್ತದೆ.
ಇದನ್ನೂ ಓದಿ:
ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ
ನಾಳೆ ಮಧ್ಯಾಹ್ನದ ವೇಳೆಗೆ ಹಾಸನದ ಪ್ರಸಿದ್ಧ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕುಟುಂಬದ ಸಾಂಪ್ರದಾಯಿಕ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ಜರುಗಲಿದೆ. ಈ ವೇಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಗುವುದು. ಪ್ರಮುಖ ರಾಜಕೀಯ ಮುಖಂಡರು ಹಾಗೂ ಗಣ್ಯರು ಈ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.



