ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಗ್ರಾಮೀಣ ಭಾಗಗಳಲ್ಲಿ ತೀವ್ರಗೊಳ್ಳುತ್ತಿರುವ ಬರಗಾಲ ಮತ್ತು ಕುಡಿಯುವ ನೀರಿನ ಅಭಾವವನ್ನು ಎದುರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಭಾರಿ ಆರ್ಥಿಕ ನೆರವು ಪ್ರಕಟಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳ (CEO) ಜತೆ ನಡೆಸಿದ ಉನ್ನತ ಮಟ್ಟದ ವಿಡಿಯೋ ಸಂವಾದದಲ್ಲಿ ಗ್ರಾಮೀಣ ತಾಲೂಕುಗಳ ಕುಡಿಯುವ ನೀರಿನ ಸಮಸ್ಯೆಗಾಗಿ ತಲಾ 1 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಘೋಷಿಸಿದರು.
ನಕಲಿ ಬಿಲ್‌ಗಳಿಗೆ ಬ್ರೇಕ್:
ಸಭೆಯಲ್ಲಿ ಅಕ್ರಮಗಳಿಗೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿರುವ ಮುಖ್ಯಮಂತ್ರಿಗಳು, “ಗ್ರಾಮಗಳಲ್ಲಿ ಹೊಸ ಬೋರ್‌ವೆಲ್ ಕೊರೆಸುವಾಗ ಕಡ್ಡಾಯವಾಗಿ ಸಂಪೂರ್ಣ ವಿಡಿಯೋ ಚಿತ್ರೀಕರಣ ಆಗಬೇಕು. ಒಂದು ವೇಳೆ ಎಲ್ಲಾದರೂ ನಕಲಿ ಪ್ರಕರಣಗಳು ಅಥವಾ ಬೋಗಸ್ ಬಿಲ್‌ಗಳು ಕಂಡುಬಂದರೆ ಅದಕ್ಕೆ ಆಯಾ ಜಿಲ್ಲೆಯ ಜಿಪಂ ಸಿಇಒಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು. ಇದರೊಂದಿಗೆ ಮುಂದಿನ 15 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಡೆಡ್‌ಲೈನ್ ವಿಧಿಸಿದರು.
ಟ್ರಾನ್ಸ್‌ಫಾರ್ಮರ್ ರಿಪೇರಿಗೆ ‘4G ವಿನಾಯಿತಿ’ ಘೋಷಣೆ
ರೈತರ ಪಂಪ್‌ಸೆಟ್‌ಗಳಿಗೆ ತೊಂದರೆಯಾಗದಂತೆ ವಿದ್ಯುತ್ ಸರಬರಾಜು ನಿಯಂತ್ರಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಮೀಣ ಭಾಗದಲ್ಲಿ ಸುಟ್ಟುಹೋಗುವ ಟ್ರಾನ್ಸ್‌ಫಾರ್ಮರ್‌ಗಳ ತ್ವರಿತ ರಿಪೇರಿಗೆ ವಿಶೇಷ ಗಮನ ನೀಡಬೇಕು. ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು ಸದಾ ಸಿದ್ಧವಾಗಿಟ್ಟುಕೊಳ್ಳಲು ಕೆಟಿಪಿಪಿ ಕಾಯ್ದೆಯಡಿ ತುರ್ತು ಟೆಂಡರ್‌ಗಾಗಿ 4G ವಿನಾಯಿತಿ ನೀಡಲಾಗುವುದು ಎಂದು ಸಿಎಂ ಪ್ರಕಟಿಸಿದರು.
ಇದನ್ನೂ ಓದಿ:
ಸಣ್ಣ ಮತ್ತು ಅತಿ ಸಣ್ಣ ರೈತರ ಹಿತವೇ ಮುಖ್ಯ ಆದ್ಯತೆ
ಕೃಷಿ, ಪಶುಸಂಗೋಪನೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಪರಸ್ಪರ ಸಮನ್ವಯತೆಯೊಂದಿಗೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನಿಗಾ ವಹಿಸಬೇಕು. ಅಧಿಕಾರಿಗಳು ಕೇವಲ ಎಸಿ ರೂಮುಗಳಲ್ಲಿ ಕುಳಿತು ಕಾಗದದ ವರದಿ ಸಿದ್ಧಪಡಿಸುವುದನ್ನು ನಿಲ್ಲಿಸಬೇಕು. ಖುದ್ದಾಗಿ ಫೀಲ್ಡ್‌ಗಿಳಿದು ಆಡಳಿತಾತ್ಮಕ ಟೀಮ್ ವರ್ಕ್ ಮತ್ತು ಕಾರ್ಯಕ್ಷಮತೆ ಪ್ರದರ್ಶಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.



