ಚೇತಕ್ ಸೇವೆಗೆ 60 ವರ್ಷ : ಸೇನೆಯ ಆತ್ಮನಿರ್ಭರಕ್ಕೆ ರಕ್ಷಣಾ ಸಚಿವರ ಒತ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೈದರಾಬಾದ್: ರಾಷ್ಟ್ರದ ಭದ್ರತೆಯು ಸೇನೆಯ ಪ್ರಮುಖ ಆದ್ಯತೆಯಾಗಿದ್ದು, ಅದನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ.

ಹೈದರಾಬಾದ್‌ನಲ್ಲಿ ಶನಿವಾರ ಚೇತಕ್ ಹೆಲಿಕಾಪ್ಟರ್‌ಗಳ ವಜ್ರಮಹೋತ್ಸವ ಸಮಾವೇಶದಲ್ಲಿ ಮಾತನಾಡಿದ ಅವರು, ರಕ್ಷಣಾ ಉತ್ಪಾದನೆ ಮತ್ತು ಸನ್ನದ್ಧತೆಗಾಗಿ ಭಾರತ ಸರಕಾರವು ಸ್ವಾವಲಂಬನೆಗೆ ಒತ್ತು ನೀಡಿದೆ ಎಂದು ಉಲ್ಲೇಖಿಸಿದ್ದಾರೆ.

ರಾಷ್ಟ್ರದ ಭದ್ರತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಮತ್ತು ಅದನ್ನು ಖಚಿತಪಡಿಸಿಕೊಳ್ಳಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ. ಕಳೆದ ಕೆಲವು ವರ್ಷಗಳ ಘಟನೆಗಳನ್ನು ಗಮನಿಸಿದರೆ, ನಮ್ಮ ಸರಕಾರವು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಮತ್ತು ಸನ್ನದ್ಧತೆಗೆ ಒತ್ತು ನೀಡಿದೆ ಎಂದರು.

ಭಾರತದಂತಹ ದೊಡ್ಡ ದೇಶವನ್ನು ರಕ್ಷಿಸುವ ಭಾರಕ್ಕೆ ಇತರ ದೇಶಗಳು ಹೆಚ್ಚು ಸಮಯ ಹೆಗಲು ನೀಡಲಾರವು. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮ್ಮ ಭುಜಗಳನ್ನು ಬಲಪಡಿಸಿಕೊಳ್ಳಬೇಕು ಎಂದ ಸಚಿವರು, ಜಗತ್ತಿನಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಬೇಕಾದರೆ, ರಾಷ್ಟ್ರಗಳ ಭದ್ರತೆಯು ಅತ್ಯಂತ ಮಹತ್ವದ್ದಾಗಿದೆ. ಭದ್ರತೆಗಾಗಿ ಸೈನ್ಯ ಬಲವಾಗಿರುವುದು ಬಹಳ ಆವಶ್ಯಕ ಎಂದು ತಿಳಿಸಿದರು.

ಐದು ಟನ್ ವಿಭಾಗದಲ್ಲಿ ಹೆಲಿಕಾಪ್ಟರ್‌ಗಳ ವಿನ್ಯಾಸ, ಅಭಿವೃದ್ಧಿ ಮತ್ತು ಕಾರ್ಯಾಚರಣೆಯಲ್ಲಿ ಭಾರತ ತನ್ನ ಶಕ್ತಿಯನ್ನು ತೋರಿಸಿದೆ. ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ, ಸುಧಾರಿತ ಲಘು ಹೆಲಿಕಾಪ್ಟರ್ – ಧ್ರುವ್ ಮತ್ತು ಅದರ ರೂಪಾಂತರಗಳು ಈ ವರ್ಗದ ಹೆಲಿಕಾಪ್ಟರ್‌ಗಳಲ್ಲಿ ಭಾರತದ ಶಕ್ತಿಗೆ ಉದಾಹರಣೆಗಳಾಗಿವೆ ಎಂದು ರಕ್ಷಣಾ ಸಚಿವ ಸಿಂಗ್ ಹೇಳಿದರು.

10 ಟನ್ ಸಾಮರ್ಥ್ಯದಲ್ಲಿ ಪ್ರಗತಿಯಾಗಬೇಕು
ಜಾಗತಿಕ ನಾಯಕರಾಗಲು ನಾವು ನಮ್ಮದೇ ಆದ 10 ಟನ್ ಸಾಮರ್ಥ್ಯದ ಭಾರತೀಯ ಮಲ್ಟಿರೋಲ್ ಹೆಲಿಕಾಪ್ಟರ್ ವಿನ್ಯಾಸದಲ್ಲಿ ಪ್ರಗತಿ ಹೊಂದಬೇಕು. ಇದು ಒಂದು ಕಡೆ ಬೃಹತ್ ಮಾರುಕಟ್ಟೆ ಸಾಮರ್ಥ್ಯವನ್ನು ಹೊಂದಿದೆ, ಮತ್ತೊಂದೆಡೆ ಇದು ನಮ್ಮ ಸ್ವಂತ ಪಡೆಗಳಿಗೆ ಗಮನಾರ್ಹ ಆವಶ್ಯಕತೆಯಾಗಿದೆ. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಾಗರಿಕ ಹೆಲಿಕಾಪ್ಟರ್‌ಗಳಿಗೆ ಬೇಡಿಕೆಯಿದೆ ಮತ್ತು ಮಿಲಿಟರಿ ವಲಯದಲ್ಲಿ ಅಷ್ಟೇ ಸಂಖ್ಯೆಯ ಹೆಲಿಕಾಪ್ಟರ್‌ಗಳಿಗೆ ಬೇಡಿಕೆಯಿದೆ ಎಂದು ಸಿಂಗ್ ತಿಳಿಸಿದರು.

ನಿರ್ಮಾಣವಾಗಿವೆ 700 ಚೇತಕ್ ಹೆಲಿಕಾಪ್ಟರ್
ಚೇತಕ್ ನಮ್ಮ ರಕ್ಷಣಾ ಪಡೆಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದೆ. ಯುದ್ಧಭೂಮಿಯಲ್ಲಿ ಶತ್ರುಗಳ ಮೇಲೆ ಅದು ತನ್ನ ನಿಖರವಾದ ಗುರಿಯಿಂದ ದಾಳಿ ಮಾಡುತ್ತದೆ. ಚೇತಕ್ ನಮ್ಮ ದೇಶದ ಪ್ರಮುಖ ವಿನ್ಯಾಸ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಒಂದಾಗಿದೆ. ಇದರ ಯಶಸ್ಸು ಭವಿಷ್ಯದಲ್ಲಿಯೂ ಇಂತಹ ಯೋಜನೆಗಳಲ್ಲಿ ಯಶಸ್ವಿಯಾಗಬಹುದೆಂಬ ವಿಶ್ವಾಸವನ್ನು ನಮಗೆ ನೀಡಿತು. ಇಲ್ಲಿಯವರೆಗೆ, ನಮ್ಮ ದೇಶದಲ್ಲಿ ಸುಮಾರು 700 ಚೇತಕ್ ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸಲಾಗಿದೆ ಎಂದು ಸಚಿವ ರಾಜನಾಥ್ ಸಿಂಗ್ ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!