1 ವರ್ಷದ ಬಳಿಕ ಗಮ್ಯ ಸ್ಥಾನ ತಲುಪಿದ ರೈಲು: ಸತ್ಯಾಂಶ ತಿಳಿದ ಅಧಿಕಾರಿಗಳಿಗೆ ಶಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸರಿಯಾದ ಸಮಯಕ್ಕೆ ರೈಲು, ಬಸ್‌, ಬರದಿರುವುದು ಕಾಮನ್. ಅಬ್ಬಬ್ಬಾ ಅಂದರೆ ಒಂದು ಗಂಟೆ/ಎರಡು ಗಂಟೆ ಅಥವಾ ತೀರಾ ಸಮಸ್ಯೆಯಿದ್ದಲ್ಲಿ ಒಂದೆರೆಡು ದಿನ. ಆದರೆ ಇಲ್ಲೊಂದು ರೈಲು ಬರೋಬ್ಬರಿ ಒಂದು ವರ್ಷಗಳ ಬಳಿಕ ತಾನು ಬಂದು ಸೇರಬೇಕಾಗಿದ್ದ ಸ್ಥಳ ತಲುಪಿದೆ. ಈ ವಿಚಾರ ತಿಳಿದ ಅಧಿಕಾರಿಗಳಿಗೆ ಇದೀಗ ದಿಕ್ಕು ತೋಚದಾಗಿದೆ. ಜಾರ್ಖಂಡ್‌ನಲ್ಲಿ ನಡೆದ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ.

ಒಂದು ವರ್ಷದ ಹಿಂದೆ ಛತ್ತೀಸ್‌ಗಢದಿಂದ ಆಹಾರ ಧಾನ್ಯಗಳನ್ನು ಹೊತ್ತು ಬರಬೇಕಿದ್ದ ರೈಲು ಮೇ 17 ರಂದು ತನ್ನ ಗಮ್ಯಸ್ಥಾನವನ್ನು ತಲುಪಿದೆ. ಮೇ 2021 ರಲ್ಲಿ ಛತ್ತೀಸ್‌ಗಢದ ರೈಲು ನಿಲ್ದಾಣದಲ್ಲಿ 1000 ಆಹಾರ ಧಾನ್ಯಗಳ ಚೀಲಗಳನ್ನು ಲೋಡ್‌ ಮಾಡಲಾಗಿತ್ತು. ಈ ರೈಲು 762 ಕಿಮೀ ಪ್ರಯಾಣಿಸಿ, ಜಾರ್ಖಂಡ್‌ನ ನ್ಯೂ ಗಿರಿದಿಹ್ ನಿಲ್ದಾಣವನ್ನು ತಲುಪಬೇಕಿತ್ತು. ತಾಂತ್ರಿಕ ಸಮಸ್ಯೆ ಕಾರಣದಿಂದಾಗಿ ಒಂದು ಇಂಚೂ ಕದಲದೆ ನಿಂತಲ್ಲೇ ನಿಂತಿದೆ. ಒಂದು ವರ್ಷಗಳ ಬಳಿಕ ಆ ಬೋಗಿಯೊಂದಿಗೆ ಗೂಡ್ಸ್ ರೈಲು ಮೇ 17 (2022) ರಂದು ನ್ಯೂ ಗಿರಿದಿಹ್ ನಿಲ್ದಾಣವನ್ನು ತಲುಪಿದೆ. ವೇಳಾಪಟ್ಟಿಯೊಂದಿಗೆ ಸಂಬಂಧವೇ ಇಲ್ಲದ ಈ ಬೋಗಿಯನ್ನು ಕಂಡು ರೈಲ್ವೆ ಅಧಿಕಾರಿಗಳು ಗಾಬರಿಗೊಂಡಿದ್ದಾರೆ. ರೈಲು ತಪಾಸಣೆ ನಡೆಸಿದ ಬಳಿಕ ಬೋಗಿಯಲ್ಲಿ ಭಾರತೀಯ ಆಹಾರ ನಿಗಮಕ್ಕೆ ಸೇರಿದ ಅಕ್ಕಿ ಲೋಡ್ ಪತ್ತೆಯಾಗಿದೆ.

ಒಂದು ವರ್ಷ ವಿಳಂಬದಿಂದ 200-300 ಮೂಟೆ ಅಕ್ಕಿ ಹಾಳಾಗಿದೆ. ಉಳಿದ ಸರಕು ತುಂಬಾ ಹಳೆಯದ್ದಾಗಿದ್ದು, ಬಳಕೆಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಹೊಸ ಗಿರಿದಿಹ್ ಠಾಣಾಧಿಕಾರಿ ಪಂಕಜ್ ಕುಮಾರ್ ತಿಳಿಸಿದ್ದಾರೆ. ಘಟನೆಯನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದು, ಅವರು ಬಂದು ಪರಿಸ್ಥಿತಿಯನ್ನು ಅವಲೋಕಿಸಿ ಈ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಾರೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!