ಗ್ರಾಮ ವಾಸ್ತವ್ಯ: ಜನರ ಸಮಸ್ಯೆ ಆಲಿಸಿದ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ

ಹೊಸದಿಗಂತ ವರದಿ, ಮಡಿಕೇರಿ:
ಕುಡಿಯುವ ನೀರು, ಸಾರ್ವಜನಿಕ ರಸ್ತೆ, ಭೂ ದಾಖಲಾತಿಗಳು, ಪಟ್ಟೆದಾರರ ಸಮಸ್ಯೆ, ಆನೆ ಹಾವಳಿ ನಿಯಂತ್ರಣ, ವಿದ್ಯುತ್ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಗ್ರಾಮ ವಾಸ್ತವ್ಯ’ ಕಾರ್ಯಕ್ರಮದಲ್ಲಿ ಕೇಳಿ ಬಂದವು.
ಕಕ್ಕಬ್ಬೆ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ತಾಲೂಕಿನ ಎಲ್ಲಾ ಅಧಿಕಾರಿಗಳ ಸಹಯೋಗದೊಂದಿಗೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ’ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕಾರ್ಯಕ್ರಮ ನಡೆಯಿತು.
ಸ್ಥಳೀಯ ರೈತರೊಬ್ಬರು ಮಾತನಾಡಿ, ರೈತರಿಗೆ ವೈಯಕ್ತಿಕ ಭೂ ದಾಖಲಾತಿ ಇಲ್ಲದಿರುವುದು ಕೊಡಗಿನ ದೊಡ್ಡ ಸಮಸ್ಯೆಯಾಗಿದೆ. ಪಿತ್ರಾರ್ಜಿತ ಆಸ್ತಿ ಇದ್ದರೂ ಸಹ ನಮಗೆ ಭೂ ದಾಖಲಾತಿಗಳು ಇರುವುದಿಲ್ಲ. ಯಾವುದೇ ದಾಖಲಾತಿ ಇಲ್ಲದ ಕಾರಣ ನಮಗೆ ಫ್ರೂಟ್ಸ್ ತಂತ್ರಾಂಶದಲ್ಲಿ ತೊಂದರೆ ಆಗುತ್ತಿದೆ ಎಂದರು.
ಗ್ರಾಮದ ಕೆಲವು ಜನರಿಗೆ ಹಕ್ಕುಪತ್ರ ಸಿಕ್ಕಿದೆ. ಇನ್ನು ಕೆಲವರಿಗೆ ಹಕ್ಕು ಪತ್ರ ಸಿಕ್ಕಿರುವುದಿಲ್ಲ. ಅಂತಹವರಿಗೆ ಹಕ್ಕು ಪತ್ರ ನೀಡುವ ಕೆಲಸವಾಗಬೇಕು. ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳಿಗೆ ಹೋಗುವ ರಸ್ತೆಯನ್ನು ಸರಿಪಡಿಸಿ ಕೊಡಬೇಕು ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಭೂದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್ ಅವರು, ಸಾರ್ವಜನಿಕರಿಂದ ಅರ್ಜಿಗಳನ್ನು ಕಂದಾಯ ಇಲಾಖೆ ವತಿಯಿಂದ ಪರಿಶೀಲನೆ ಮಾಡಿ ಆದಷ್ಟು ಬೇಗ ಪರಿಹರಿಸಿ ಕೊಡಲಾಗುವುದು ಎಂದು ಹೇಳಿದರು.
ಕಂದಾಯ ನಿಗದಿ:
ಜಿಲ್ಲಾಧಿಕಾರಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಂದಾಯ ನಿಗದಿಗೆ ಬಹಳ ಬೇಡಿಕೆ ಇದೆ. ಸರ್ಕಾರದ ವತಿಯಿಂದ ಸರ್ವೆ ನಡೆಸಿ ಇದನ್ನು ಪರಿಹರಿಸಲಾಗುವುದು ಎಂದರು. ಈಗಾಗಲೇ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಅದನ್ನು ಅವರು ಕಳೆದುಕೊಂಡಿದ್ದರೆ ಅದರ ನಕಲಿ ಹಕ್ಕುಪತ್ರ ತಹಶೀಲ್ದಾರ್ ಕಚೇರಿಯಲ್ಲಿ ಇರುತ್ತದೆ. ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಾತನಾಡಿ ಹಕ್ಕುಪತ್ರ ಇದ್ದರೂ ಸಹ ಫಲಾನುಭವಿಗಳಿಗೆ ಮನೆ ಇರುವುದಿಲ್ಲ. ಸೂಕ್ತ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮುಂತಾದ ದಾಖಲೆಗಳು ಇಲ್ಲದ ಕಾರಣ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಕೊಡಗು ಜಿಲ್ಲೆಯಲ್ಲಿ ಕಂದಾಯಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ, ರಸ್ತೆ ಕಾಮಗಾರಿ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ನೀಡಲು ಆಗುವುದಿಲ್ಲ, ಗ್ರಾಮ ಪಂಚಾಯಿತಿಯೂ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವುದರಿಂದ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಕಾಮಗಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಗ್ರಾಮಸ್ಥರಾದ ಪುಟ್ಟಪ್ಪ ಅವರು ಮಾತನಾಡಿ ಪ್ರತಿ ಮನೆಗೆ ವಿದ್ಯುತ್, ರಸ್ತೆ, ಕುಡಿಯುವ ನೀರು, ಇನ್ನಿತರ ಸೌಲಭ್ಯಗಳಿದ್ದರೂ ಕೂಡ ನಮ್ಮ ಗ್ರಾಮದಲ್ಲಿ ಹಲವಾರು ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಇನ್ನೂ ಕೂಡ ಸಿಕ್ಕಿರುವುದಿಲ್ಲ. ವಿದ್ಯುತ್ ಸಮಸ್ಯೆಯೂ ಕೂಡ ಬಹಳ ಇದೆ ಈ ಕುರಿತು ಸಂಬಂಧಪಟ್ಟವರಿಗೆ ತಿಳಿಸಿದರೂ ಸ್ಪಂದಿಸುತ್ತಿಲ್ಲ ಎಂದರು.
ಸೆಸ್ಕ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅಶೋಕ್ ಅವರು ಮಾತನಾಡಿ, ಈ ಭಾಗದ ವಿದ್ಯುತ್ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹಾರ ಮಾಡಿಕೊಡಲಾಗುವುದು ಎಂದು ಹೇಳಿದರು.
ಕುಂಜಿಲ ಗ್ರಾಮದ ನಾಣಯ್ಯ ಅವರು ಮಾತನಾಡಿ ಗ್ರಾಮದಲ್ಲಿ ಕಾಫಿ ತೋಟವಿದ್ದು, ತೋಟಕ್ಕೆ ಹೋಗಲು ರಸ್ತೆಯೇ ಇರುವುದಿಲ್ಲ. ತೋಟಕ್ಕೆ ಹೋಗುವ ದಾರಿಯಲ್ಲಿ ಪೈಸಾರಿ ಜಾಗವಿದ್ದು, ಜಾಗವನ್ನು ಸರ್ಕಾರ ಫಲಾನುಭವಿಗಳಿಗೆ ನೀಡಿದೆ. ಅಲ್ಲಿ ವಾಸಿಸುವ ಜನರು ನಮಗೆ ತೋಟಕ್ಕೆ ಹೋಗಲು ರಸ್ತೆ ಬಿಡುತ್ತಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿ ಅವರ ಗಮನಕ್ಕೆ ತಂದರು.
ಇದಕ್ಕೆ ಜಿಲ್ಲಾಧಿಕಾರಿ ಅವರು ಪ್ರತಿಕ್ರಿಯಿಸಿ,  ನಕಾಶೆ ಇದ್ದಲ್ಲಿ ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಮದಲ್ಲಿ ಆನೆ ಹಾವಳಿ ಹೆಚ್ಚಿದ್ದು, ಆನೆ ಹಾವಳಿಯನ್ನು ತಡೆಯುವಂತೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು. ಮತ್ತು ಗ್ರಾಮದಲ್ಲಿ ವೈದ್ಯಕೀಯ ಸೇವೆ, ರೈತರಿಗೆ ರಸಗೊಬ್ಬರ ವಿತರಣೆ, ಪೌಷ್ಠಿಕ ಆಹಾರ, ಹೀಗೆ ಹತ್ತು ಹಲವು ವಿಷಯಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು.
ಫಲಾನುಭವಿಗಳಿಗೆ ಸಾಗುವಳಿ ಚೀಟಿ ಮತ್ತು ಮಾಸಾಶನ ಪತ್ರವನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿತರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮಸ್ಥರು ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!