ನಾಡೋಜ ಚನ್ನವೀರ ಕಣವಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಂಗಳೂರು: ನಾಡೋಜ ಚನ್ನವೀರ ಕಣವಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನಾಡು ಕಂಡ ಅತ್ಯಂತ ಸೃಜನಶೀಲ ಸಾಹಿತಿ, ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಸ್ಥಾನವನ್ನು ಪಡೆದಿದ್ದರು. ಕಳೆದ ನಾಲ್ಕು ದಶಕಗಳಿಂದ ಅವರು ಮತ್ತು ಅವರ ಕುಟುಂಬ ನಮಗೆ ಬಹಳಷ್ಟು ಆತ್ಮೀಯರಾಗಿದ್ದರು. ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಅವರು ತಮ್ಮ ಮೃದು ಹಾಗೂ ಮಾನವೀಯತೆಯತೆಯ ಮಾತುಗಳಿಂದ ಮನಸ್ಸು ಗೆಲ್ಲುವ ಅಪರೂಪದ ವ್ಯಕ್ತಿತ್ವ ಹೊಂದಿದ್ದರು. ಅವರು ಕೋಪ ಮಾಡಿಕೊಂಡಿದ್ದನ್ನು ನೋಡಿಯೇ ಇಲ್ಲ ಎಂದ ಮುಖ್ಯ ಮಂತ್ರಿಗಳು, ಎಲ್ಲಾ ಸಮಸ್ಯೆಗಳಿಗೆ ಸಕಾರಾತ್ಮಕ ಪರಿಹಾರ ಸೂಚಿಸುವ ಸಾಹಿತ್ಯ ರಚನೆ ಮಾಡಿದ್ದಾರೆ. ಸಾಹಿತ್ಯದ ಮುಖಾಂತರ ತಮ್ಮ ಕಲ್ಪನೆ ಮತ್ತು ವಾಸ್ತವಾಂಶವನ್ನು ಕೂಡ ಪರಿಣಾಮಕಾರಿಯಾಗಿ ಬಿಂಬಿಸಿದವರು. ನಾಡೋಜ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಪ್ರಶಸ್ತಿಗೆ ಗೌರವ ತಂದುಕೊಡುವ ರೀತಿಯಲ್ಲಿ ಅವರ ವ್ಯಕ್ತಿತ್ವವಿತ್ತು. ಸದಾ ಕಾಲ ತಮ್ಮ ಸಂಯಮ ಹಾಗೂ ಗಾಂಭೀರ್ಯತೆಯನ್ನು ಮೆರೆದವರು.

ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಬಹಳ ದೊಡ್ಡ ಹಾನಿಯಾಗಿದೆ. ಒಬ್ಬ ಧೀಮಂತ, ಮಾರ್ಗದರ್ಶಕರು ಇಲ್ಲದಂತಾಗಿದೆ. ಸಾತ್ವಿಕ ಚಿಂತಕರು ಇಲ್ಲದ ಈ ಕಾಲದಲ್ಲಿ ಚನ್ನವೀರ ಕಣವಿ ಅವರ ಇರುವಿಕೆ ಪ್ರಸ್ತುತವಾಗಿತ್ತು. ಈ ಸಂದರ್ಭದಲ್ಲಿ ಅವರನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ. ಚಂಪಾ, ಪ್ರೊ.ಸಿದ್ದಲಿಂಗಯ್ಯ ಅವರನ್ನು ಕಳೆದುಕೊಂಡ ಬೆನ್ನಲ್ಲೇ ಒಬ್ಬೊಬ್ಬರಾಗಿ ಸಾಹಿತ್ಯ ಲೋಕದ ದಿಗ್ಗಜರನ್ನು ಕಳೆದುಕೊಳ್ಳುತ್ತಿದ್ದೇವೆ. ಕಳೆದುಕೊಂಡ ಮಹನೀಯರ ಸ್ಮರಣೆಯಿಂದ ಪ್ರೇರಣೆ ಪಡೆಯುತ್ತಾ ಹೊಸ ಸಾಹಿತಿಗಳು, ಚಿಂತಕರು ಬರಬೇಕು. ಅವರೂ ಈ ದಿಗ್ಗಜರು ಏರಿದ್ದ ಮೇರು ಸ್ಥಾನಕ್ಕೆ ತಲುಪಬೇಕು. ಆಗ ಮಾತ್ರ ಕನ್ನಡದ ಶ್ರೀಮಂತ ಸಾಹಿತ್ಯ ನಿರಂತರವಾಗಿ ಮುಂದುವರೆಯುತ್ತದೆ. ಎಂಟು ಜ್ಞಾನ ಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ನಮ್ಮ ಕರ್ನಾಟಕದ್ದು. ಇನ್ನಷ್ಟು ಜ್ಞಾನಪೀಠಗಳು ಬರುವ ರೀತಿಯಲ್ಲಿ ಸಾಹಿತ್ಯ ಲೋಕ ತನ್ನ ಕೊಡುಗೆಯನ್ನು ಸಾಹಿತ್ಯ ಲೋಕಕ್ಕೆ ನೀಡಬೇಕೆಂದರು.

ಸರಕಾರ ಸಾಹಿತ್ಯ ಕ್ಷೇತ್ರಕ್ಕೆ ಅಗತ್ಯವಿರುವ ಬೆಂಬಲ ನೀಡಲು ಸಿದ್ಧವಿದೆ. ಈ ಮುಖಾಂತರವೇ ಕಣವಿಯವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ.

ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!