ಚಿಕ್ಕಬಳ್ಳಾಪುರ ಜಿಲ್ಲಾ ಉತ್ಸವಕ್ಕೆ ಊರಹಬ್ಬದ ಮೆರುಗು: ಪಲ್ಲಕ್ಕಿಗಳಲ್ಲಿ ವಿರಾಜಮಾನವಾದ ಗ್ರಾಮ ದೇವತೆಗಳು

ಹೊಸದಿಗಂತ ವರದಿ ಚಿಕ್ಕಬಳ್ಳಾಪುರ: 

ತಳಿರು ತೋರಣಗಳಿಂದ ಸಿಂಗರಿಸಿದ ಗ್ರಾಮಗಳು, ರಂಗೋಲಿಯಿಂದ ಕಂಗೊಳಿಸುತ್ತಿರುವ ಗ್ರಾಮಗಳ ಬೀದಿಗಳು, ಅಲಂಕೃತ ಪಲ್ಲಕ್ಕಿಗಳಲ್ಲಿ ಹೂವಿನ ಸಿಂಗಾರದೊಂದಿಗೆ ವಿರಾಜಮಾನವಾದ ಗ್ರಾಮ ದೇವತೆಗಳು, ಕಳಶಗಳನ್ನು ಹೊತ್ತ  ಮುತ್ತೈದೆಯರು… ಕೆರೆಗಳು ತುಂಬಿವೆ, ಬತ್ತಿದ ಬಾವಿಗಳಲ್ಲಿ ನೀರು ಉಕ್ಕಿದೆ, ಬೆಳೆ ಕೈಗೆ ಬಂದಿದೆ, ಬರಡಾಗಿದ್ದ ನೆಲ ಹಸಿರಾಗಿ ಕಂಗೊಳಿಸುತ್ತಿದೆ, ಇದೇ ಸಮಯಕ್ಕೆ ಜಿಲ್ಲೆಯಾಗಿ 15 ವರ್ಷ ಪೂರ್ತಿಯಾಗಿದೆ. ಇದೇ ಅಲ್ಲವೆ ನೇಗಿಲಯೋಗಿಗೆ ಸಂಭ್ರಮದ ಕ್ಷಣಗಳು.

ವರ್ಷ ಪೂರ್ತಿ ದುಡಿಯುವ ಅನ್ನದಾತನಿಗೂ ಸಂಭ್ರಮಿಸಲು ಸಮಯ ನಿಗದಿ ಮಾಡುವ ಮೂಲಕ ಉತ್ಸವದಲ್ಲಿ ಅವಕಾಶ ಕಲ್ಪಿಸಿದ ಆರೋಗ್ಯ ಸಚಿವರ ತೀರ್ಮಾನಕ್ಕೆ ಕೃಷಿಕ ವಲಯದಿಂದ ಕೃತಜ್ಞತೆಗಳ ಮಹಾಪೂರವೇ ಹರಿದುಬಂದಿದೆ.

ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲ 430 ಹಳ್ಳಿಗಳಲ್ಲಿಯೂ ಬುಧವಾರ ಹಬ್ಬದ ವಾತಾವಣ ಸೃಷ್ಟಿಯಾಗಿತ್ತು. ಗ್ರಾಮದ ಹೆಬ್ಬಾಗಿಲಿಗೆ ತಳಿರು ತೋರಣಗಳ ಸಿಂಗಾರ ಮಾಡಿ, ಗ್ರಾಮದೇವತೆಗಳನ್ನು ಗ್ರಾಮದ ಮಧ್ಯೆ ಪ್ರತಿಷ್ಠಾಪಿಸಿ, ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಪ್ರಸ್ತುತ ಇರುವ ಸಮೃದ್ಧಿ ನಿರಂತರವಾಗಿ ಮುಂದುವರಿಯಲಿ ಎಂಬ ಬೇಡಿಕೆಯನ್ನು ಜನರು ಗ್ರಾಮದೇವತೆಗಳಲ್ಲಿ ಕೋರಿದರು.

ಹಲವು ಗ್ರಾಮಗಳಲ್ಲಿ ಗ್ರಾಮದೇವರ ಪಲ್ಲಕ್ಕಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ಕಳಶ ಹೊತ್ತ ಮುತ್ತೈದೆಯರು ಗ್ರಾಮದೇವತೆಗಳ ಮುಂದೆ ಸಾಗಿ ಪೂರ್ಣಕುಂಭದ ಮೆರುಗು ನೀಡುವಲ್ಲಿ ಯಶಸ್ವಿಯಾದರು.

ತುಂಬಿದ ಕೆರೆಗಳಿಗೆ ಬಾಗಿನ

ದಶಕಗಳ ನಂತರ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರು ನೋಡುವಂತಾಗಿದೆ. ಕೆಲವು ಕೆರೆಗಳು ತುಂಬಿ ಕೋಡಿ ಹರಿದು 30 ವರ್ಷಗಳೇ ಕಳೆದಿದ್ದವು. ಇಂತಹ ಕೆರೆಗಳೂ ಈಗ ತುಂಬಿ ಹರಿಯುವ ಮೂಲಕ ರೈತರ ಸಂಕಷ್ಟ ಪರಿಹರಿಸಿರುವುದರಿಂದ ಸಾವಿರಾರು ಅಡಿ ಆಳ ಕೊರೆದರೂ ನೀರು ಸಿಗದೆ ಪರದಾಡುತ್ತಿದ್ದ ರೈತರಿಗೆ ಈಗಾಗಲೇ ಕೊರೆದು ವಿಫಲವಾದ ಕೊಳವೆ ಬಾವಿಗಳಲ್ಲಿಯೂ ನೀರು ಉಕ್ಕುತ್ತಿರುವುದನ್ನು ಕಂಡು ಸಂತಸಗೊಂಡಿದ್ದಾರೆ.

ಇದರಿಂದಾಗಿ ಸಂತುಷ್ಟಗೊಂಡಿರುವ ಕೃಷಿಕ ಸಮುದಾಯ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸುವ ಮೂಲಕ ಭಕ್ತಿ ತೋರಿಸುವ ಕೆಲಸವನ್ನು ಬುದವಾರ ಮಾಡಿದರು. ವೀರಗಾಸೆ, ಪೂರ್ಣಕುಂಭ, ಮಂಗಳವಾದ್ಯಗಳ ಜೊತೆಗೆ ತಮಟೆ ವಾದ್ಯಗಳೊಂದಿಗೆ ಕಳಶ ಹೊತ್ತ ಮುತ್ತೈದೆಯರ ಸಮ್ಮುಖದಲ್ಲಿ ಕೆರೆಗಳಿಗೆ ತೆರಳಿದ ಗ್ರಾಮೀಣರು ತುಂಬಿದ ಕೆರೆಗಳಿಗೆ ಬಾಗಿನ ಸಮರ್ಪಣೆ ಮಾಡಿದರು.

ವೀರಗಾಸೆಯೊಂದಿಗೆ ಅದ್ಧೂರಿ ಬಾಗಿನ

ಮಂಚೇನಹಳ್ಳಿ ತಾಲೂಕಿನ ಹಳೇಹಳ್ಳಿ ಗ್ರಾಪಂನಿಂದ ಊರಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಸುತ್ತಮುತ್ತಲ ಸುಮಾರು ನಾಲ್ಕು ಗ್ರಾಮಗಳ 500ಕ್ಕೂ ಹೆಚ್ಚು ಜನರು ಸೇರಿ, ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ವೀರಗಾಸೆ, ಮಂಗಳವಾದ್ಯಗಳೊಂದಿಗೆ ಪೂರ್ಣಕುಂಭ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿಸಿ, ನಂತರ ಕೆರೆಯವರೆಗೂ ಪೂರ್ಣಕುಂಭ ಮತ್ತು ವೀರಗಾಸೆಯೊಂದಿಗೆ ಸಾಗಿ ನಾಗರಬಾವಿ ಕೆರೆಗೆ ಬಾಗಿನ ಸಮರ್ಪಣೆ ಮಾಡಿದರು.

ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ, ಬೊಮ್ಮನಹಳ್ಳಿ, ನಂದಿ, ಪೆರೇಸಂದ್ರ ಸೇರಿದಂತೆ ಬಹುತೇಕ ಎಲ್ಲ ಗ್ರಾಮಗಳಲ್ಲಿಯೂ ಊರ ಹಬ್ಬ ಅದ್ಧೂರಿಯಾಗಿ ನೆರವೇರಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!