ಹೊಸದಿಗಂತ ಕಲಬುರಗಿ:
ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದ ದಂಪತಿಗಳಾದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಗೆ ಜನಿಸಿದ ಮಗುವನ್ನು ನಗರದ ಜಿಮ್ಸ್ ಸರ್ಕಾರಿ ಆಸ್ಪತ್ರೆಯಿಂದ ನರ್ಸ್ ವೇಷದಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ಅಪಹರಣ ಮಾಡಿದ್ದು, ಇದೀಗ ಪೋಲಿಸರ ತನಿಖೆಯ ನಂತರ ಅಪಹರಣವಾಗಿದ್ದ ಗಂಡು ಮಗು ಕೊನೆಗೂ ತಾಯಿಯ ಮಡಿಲು ಸೇರಿದೆ.
ಸೋಮವಾರ ಮಧ್ಯಾಹ್ನದ ಹೊತ್ತಿಗೆ ನಗರದ ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್)ನ ತಾಯಿ ಮತ್ತು ಮಕ್ಕಳ ಚಿಕಿತ್ಸಾ ಘಟಕದಿಂದ ಆಸ್ಪತ್ರೆಯ ನರ್ಸ್ಗಳ ವೇಷ ಧರಿಸಿ ಬಂದಿದ್ದ ಇಬ್ಬರು ಮಹಿಳಾ ಕಳ್ಳರು ಶಿಶುವಿನ ರಕ್ತ ಪರೀಕ್ಷೆ ಮಾಡಿಸಬೇಕು ಎಂದು ನೆಪ ಹೇಳಿ, ಮಗುವಿನ ಅಪಹರಣ ಮಾಡಿದ್ದರು. ಅಪಹರಣ ಮಾಡಿದ 36 ಗಂಟೆಗಳಲ್ಲಿ ಶಿಶು ತನ್ನ ಹೆತ್ತ ಕರುಳಿನ ಮಡಿಲು ಸೇರಿದೆ.
ಶಿಶುವಿನ ಅಪಹರಣ ಕುರಿತು ಬ್ರಹ್ಮಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೋಲಿಸರು,ಮಗುವಿನ ಪತ್ತೆಗಾಗಿ ವಿಶೇಷ ತನಿಖಾ ತಂಡಗಳನ್ನು ರಚನೆ ಮಾಡಿ, ತ್ವರಿತವಾಗಿ ತನಿಖೆ ನಡೆಸುವ ಮೂಲಕ ಬುಧವಾರ ನಸುಕಿನ ಜಾವದಲ್ಲಿ ಅಪಹರಣವಾದ ಗಂಡು ಶಿಶುವನ್ನು ತಾಯಿಯ ಮಡಿಲಿಗೆ ಹಾಕಿದ್ದು, ಅಪಹರಿಸಿದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವೈದ್ಯಕೀಯ ಶಿಕ್ಷಣ ಸಚಿವರ ಭೇಟಿ.
ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಮಗು ಅಪಹರಣದ ಮಾಹಿತಿ ಪಡೆದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಮಗುವಿನ ಪತ್ತೆಗಾಗಿ ಪೋಲಿಸರಿಗೆ ನಿರ್ದೇಶನ ನೀಡಿದ್ದರು.ಪೋಲಿಸರ ತ್ವರಿತ ತನಿಖೆಯಿಂದ ಇದೀಗ ಪುಟ್ಟ ಶಿಶು ತಾಯಿಯ ಮಡಿಲಿಗೆ ಬಂದಿದೆ.