ದೇಹಕ್ಕೆ ಅಗತ್ಯವಿರುವ ಪ್ರಮಾಣದ ನೀರು ಅಥವಾ ದ್ರವಾಂಶ ಇಲ್ಲದಿದ್ದಾಗ ಡಿಹೈಡ್ರೇಶನ್ ಉಂಟಾಗುತ್ತದೆ. ಮಕ್ಕಳಲ್ಲಿ ಇದು ಬೇಗನೆ ಗಂಭೀರ ರೂಪ ಪಡೆಯಬಹುದು. ಹಾಗಾಗಿ, ನಿಮ್ಮ ಮಗುವಿನಲ್ಲಿ ಈ ಕೆಳಗಿನ ಬದಲಾವಣೆಗಳಿವೆಯೇ ಎಂದು ಗಮನಿಸಿ.
ಮಗು ದಿನಕ್ಕೆ ಕನಿಷ್ಠ 6 ರಿಂದ 8 ಬಾರಿ ಮೂತ್ರ ವಿಸರ್ಜನೆ ಮಾಡಬೇಕು. ಒಂದು ವೇಳೆ ಮಗು 6 ಗಂಟೆಗಿಂತ ಹೆಚ್ಚು ಸಮಯ ಮೂತ್ರ ಮಾಡದಿದ್ದರೆ ಅಥವಾ ಮೂತ್ರವು ಗಾಢ ಹಳದಿ ಬಣ್ಣದಲ್ಲಿದ್ದರೆ ಅದು ನಿರ್ಜಲೀಕರಣದ ಸ್ಪಷ್ಟ ಲಕ್ಷಣ.
ಮಗುವಿನ ಬಾಯಿ ಒಣಗಿದಂತಿದ್ದರೆ, ತುಟಿಗಳು ಬಿರುಕು ಬಿಟ್ಟಿದ್ದರೆ ಅಥವಾ ಅಳುವಾಗ ಕಣ್ಣೀರು ಬರದಿದ್ದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿದೆ ಎಂದು ತಿಳಿಯಬೇಕು.
ಸಾಮಾನ್ಯವಾಗಿ ಚಟುವಟಿಕೆಯಿಂದ ಇರಬೇಕಾದ ಮಗು ಇದ್ದಕ್ಕಿದ್ದಂತೆ ವಿಪರೀತ ಸುಸ್ತು ಪ್ರದರ್ಶಿಸಿದರೆ, ಸದಾ ನಿದ್ದೆ ಮಾಡಲು ಬಯಸಿದರೆ ಅಥವಾ ಆಟವಾಡಲು ಆಸಕ್ತಿ ತೋರದಿದ್ದರೆ ತಕ್ಷಣ ಗಮನಹರಿಸಿ.
ಮಗುವಿನ ಕಣ್ಣುಗಳು ಒಳಗಡೆ ಹೋದಂತೆ ಅಥವಾ ಕುಳಿ ಬಿದ್ದಂತೆ ಕಂಡರೆ ಅದು ತೀವ್ರತರದ ಡಿಹೈಡ್ರೇಶನ್ ಇರಬಹುದು. ನವಜಾತ ಶಿಶುಗಳ ತಲೆಯ ಮೇಲ್ಭಾಗದ ಮೆದು ಭಾಗ ತಗ್ಗು ಬಿದ್ದಂತಿದ್ದರೂ ಸಹ ಅದು ಅಪಾಯದ ಸೂಚನೆ.
ಮಗುವಿನ ಹೊಟ್ಟೆಯ ಭಾಗದ ಚರ್ಮವನ್ನು ಮೆಲ್ಲಗೆ ಚಿವುಟಿ ಬಿಟ್ಟಾಗ, ಅದು ತಕ್ಷಣ ಮೊದಲಿನ ಸ್ಥಿತಿಗೆ ಬರದೇ ನಿಧಾನವಾಗಿ ವಾಪಸ್ ಹೋದರೆ ದ್ರವಾಂಶದ ಕೊರತೆಯಿದೆ ಎಂದರ್ಥ.



