ಲಾಕ್‌ಡೌನ್’ನಿಂದ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪಿಡುಗು ಹೆಚ್ಚಳ: ಬುಡಕಟ್ಟು ಕಾರ್ಮಿಕರ ಸಂಘ ಕಳವಳ

ಹೊಸದಿಗಂತ ವರದಿ, ಮಡಿಕೇರಿ:

ಕೋವಿಡ್ ಹೆಸರಿನಲ್ಲಿ ಶಾಲೆಗಳನ್ನು ಬಂದ್ ಮಾಡದೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ತರಗತಿಗಳನ್ನು ಮುಂದುವರೆಸುವಂತೆ ಬುಡಕಟ್ಟು ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಶೈಲೇಂದ್ರ ಸಲಹೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದೆರಡು ವರ್ಷಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಅಸಂಘಟಿತ ಕಾರ್ಮಿಕರ ಜೀವನೋಪಾಯ ಪರಿಸ್ಥಿತಿಗಳು ಅತ್ಯಂತ ಶೋಚನೀಯವಾಗಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.
ಹಾಡಿಗಳಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣವಿಲ್ಲದೆ ಖಿನ್ನತೆ, ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಸಮಸ್ಯೆಗಳಾದ ಬಾಲ್ಯವಿವಾಹ, ಬಾಲ ಕಾರ್ಮಿಕರಾಗಿ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ 15 ವರ್ಷ ಮೇಲ್ಪಟ್ಟವರಿಗೂ ಕೋವಿಡ್ ಚುಚ್ಚುಮದ್ದು ನೀಡುತ್ತಿರುವುದರಿಂದ ಸರ್ಕಾರ ಕೋವಿಡ್ ಸುರಕ್ಷತೆಯ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿ ಮಕ್ಕಳ ಶಾಲಾ ಶಿಕ್ಷಣದೊಂದಿಗೆ ಹಳ್ಳಿ, ಹಾಡಿ, ಕಾಲೋನಿಗಳಲ್ಲಿ ನಿರಂತರವಾಗಿ ಸಂಜೆ ತರಗತಿಗಳು ಆರಂಭವಾಗುವಂತೆ ಕ್ರಮ ಕೈಗೊಳ್ಳಬೇಕು. ಡಿ.ಎಡ್, ಬಿ.ಎಡ್ ಪದವಿ ಮುಗಿಸಿದ ಯುವಕರಿಗೆ ತರಬೇತಿ ನೀಡಿ ತೊಡಗಿಸಿಕೊಳ್ಳುವ ಹಾಗೆ ಮಾಡಬೇಕು ಮತ್ತು ಇವರಿಗೆ ವಿಶೇಷ ಗೌರವ ಧನ ನೀಡಬೇಕೆಂದು ಒತ್ತಾಯಿಸಿದರು.
ಅನಿವಾರ್ಯ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಜಾರಿ ಮಾಡಿದರೆ ಎಲ್ಲಾ ಅಸಂಘಟಿತ ವಲಯದ ಕಾರ್ಮಿಕರ ನಿರ್ವಹಣೆಗೆ ಪ್ರತಿ ಕುಟುಂಬಕ್ಕೆ ಮಾಸಿಕ ಕನಿಷ್ಟ ವೇತನ ರೂ.10 ಸಾವಿರವನ್ನು ನೀಡಬೇಕೆಂದು ಮನವಿ ಮಾಡಿದರು.
ಅಸಂಘಟಿತ ಕಾರ್ಮಿಕರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ ಮಂದಿ ಮನೆ ಬಾಡಿಗೆ ಕಟ್ಟಲೂ ಸಾಧ್ಯವಾಗದೆ, ಆಹಾರ ಸಾಮಾಗ್ರಿ ಕೊಂಡುಕೊಳ್ಳಲಾಗದೆ, ಮಕ್ಕಳ ಶಾಲಾ ಶುಲ್ಕವನ್ನು ಭರಿಸಲಾಗದೆ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮಕ್ಕಳ 2020-21ರ 2021-22 ನೇ ಸಾಲಿನ ಬಾಕಿ ಶಾಲಾ ಶುಲ್ಕವನ್ನು ಮನ್ನಾ ಮಾಡಬೇಕು ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಶುಲ್ಕ ಭರಿಸುವಂತೆ ಸರಕಾರದ ವತಿಯಿಂದ ವಿಶೇಷ ಆದೇಶ ಹೊರಡಿಸಬೇಕೆಂದು ಶೈಲೇಂದ್ರ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳು ಭೇಟಿ ನೀಡಲಿ: ಕೊಡಗಿನ ಲೈನ್‌ಮನೆಗಳಲ್ಲಿ ವಾಸವಿರುವ ಬುಡಕಟ್ಟು ಸಮುದಾಯದ ಕುಟುಂಬಗಳಿಗೆ ನಿವೇಶನ ಹಾಗೂ ಹಕ್ಕುಪತ್ರ ನೀಡಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಲೈನ್‌ಮನೆಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕಾರ್ಮಿಕರ ಕಷ್ಟ ಅರಿಯಬೇಕು ಎಂದು ಶೈಲೇಂದ್ರ ಹಾಗೂ ಹಾತೂರು ಘಟಕದ ಉಪಾಧ್ಯಕ್ಷೆ ಬಿ.ಕೆ.ರಾಣಿ ಒತ್ತಾಯಿಸಿದರು.
ಜಿಲ್ಲಾಡಳಿತ ಇತ್ತೀಚೆಗೆ ನಡೆಸಿರುವ ಸರ್ವೆಯಿಂದ ಸುಮಾರು 8 ಸಾವಿರ ಕುಟುಂಬಗಳು ಕಾಫಿ ತೋಟದ ಲೈನ್‌ಮನೆಗಳಲ್ಲಿ ವಾಸವಾಗಿರುವುದು ದೃಢಪಟ್ಟಿದೆ. ಆದರೆ ಕೊಡಗಿನಲ್ಲಿ ಸುಮಾರು ಹತ್ತು ಸಾವಿರ ಕುಟುಂಬಗಳು ಲೈನ್‌ಮನೆಯಲ್ಲಿದ್ದು, ನಿರಂತರವಾಗಿ ಸಾಲದಲ್ಲಿಯೇ ಬದುಕುವಂತಾಗಿದೆ. ತಲೆಮಾರಿನಿಂದ ತಲೆಮಾರಿಗೆ ಸಾಲದ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಲ ನೀಡಿರುವುದಕ್ಕೆ ಯಾವುದೇ ರೀತಿಯ ದಾಖಲೆಗಳಿಲ್ಲದಿದ್ದರೂ ಮಾಲಕರು ಹೇಳಿದ್ದನ್ನು ಕಾರ್ಮಿಕರು ಒಪ್ಪಿಕೊಳ್ಳುವ ಪರಿಸ್ಥಿತಿ ಇದೆ. ಜಿಲ್ಲಾಧಿಕಾರಿಗಳು ಕಾಫಿ ತೋಟದ ಲೈನ್‌ಮನೆಗಳಿಗೆ ಭೇಟಿ ನೀಡಿ ಅಲ್ಲಿನ ನೈಜ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಕಾಯ್ದೆ ಪ್ರಕಾರ ಕಾರ್ಮಿಕರಿಗೆ ಕನಿಷ್ಟ ವೇತನ 358 ರೂ. ಇದ್ದರೂ ಕೇವಲ ರೂ.150, 200, 250 ರಂತೆ ನೀಡಲಾಗುತ್ತಿದೆ. ಇದರಿಂದ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವ ಬುಡಕಟ್ಟು ಮಕ್ಕಳು ಕೂಲಿ ಕಾರ್ಮಿಕರಾಗಿ ಬದಲಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಲೈನ್‌ಮನೆಯಲ್ಲಿ ವಾಸವಿರುವ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ನೀಡಿ ಪುನರ್ ವಸತಿ ಕಲ್ಪಿಸುವಂತೆ ಬುಡಕಟ್ಟು ಕಾರ್ಮಿಕ ಸಂಘಟನೆಯಿಂದ ಕಳೆದ 5 ವರ್ಷಗಳಿಂದ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಮಾಡುತ್ತಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸುಮಾರು 10 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡುವುದಾದಲ್ಲಿ ಈಗ ಇರುವ ನೀತಿಗೆ ತಿದ್ದುಪಡಿ ತರುವ ಅಗತ್ಯವಿದ್ದು, ಜಿಲ್ಲಾಡಳಿತ ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕೆಂದು ಶೈಲೇಂದ್ರ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ವೈ.ಬಿ.ಗಪ್ಪು, ಸದಸ್ಯರಾದ ವೈ.ಎ.ದೇವಕ್ಕಿ, ಚಿನ್ನಮ್ಮ ಹಾಗೂ ವೈ.ಎಂ.ರತಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!