ಮೇಘನಾ ಶೆಟ್ಟಿ ಶಿವಮೊಗ್ಗ
ಮದುವೆಯಾದಾಗ ಗಂಡನ ಹಿಂದೆಹಿಂದೆಯೇ ಓಡಾಡುವ ಹೆಂಡತಿ ಮಗು ಆದ ನಂತರ ಮಗುವಿನ ಹಿಂದೆ ಬಟ್ಟಲು ಹಿಡಿದು ಓಡಾಡ್ತಾಳೆ, ಆಕೆ ʼಹೆಂಡತಿʼ ಅನ್ನೋದು ಆ ಕ್ಷಣಕ್ಕೆ ಮರೆತು ಹೋಗುತ್ತದೆ. ಹೊಸ ಜವಾಬ್ದಾರಿಯಾದ ʼಅಮ್ಮʼನ ರೋಲ್ ಆಕೆಗೆ ಮುಖ್ಯವಾಗುತ್ತದೆ..
ಹೊಸತರಲ್ಲಿ ಸಿನಿಮಾಗೆ ಹೋಗೋಣ್ವಾ? ಎಂದು ಟಿಕೆಟ್ ಫೋಟೊ ಕಳಿಸುತ್ತಿದ್ದ ಗಂಡ, ಈಗ ಬೆಳಗ್ಗೆ ನೀನು ಸ್ನಾನಕ್ಕೆ ಹೋದಾಗ ನಾನು ಮಗಳು ತೆಗೆದುಕೊಂಡ ಫೋಟೊ ನೋಡು.. ಎಂದು ಮಗಳ ಜೊತೆಗಿನ ಸೆಲ್ಫಿ ಕಳಿಸ್ತಾನೆ.. ಆತನೂ ತಾನು ʼಗಂಡʼ ಅನ್ನೋದನ್ನು ಮರೆತು ನಾನು ʼಅಪ್ಪʼ ನನ್ನ ಮಗುವೇ ಸರ್ವಸ್ವ ಎಂದು ಮನಸ್ಸಿನಲ್ಲಿ ಗಟ್ಟಿಯಾಗಿ ಹಚ್ಚೆ ಹಾಕಿಕೊಂಡಿರುತ್ತಾನೆ..
ಈ ಎಲ್ಲದರ ಮಧ್ಯೆ ಮಗು ಆಗುವುದಕ್ಕೂ ಮುನ್ನ ತಾವು ಹೇಗೆ ಇದ್ದೆವು ಎನ್ನೋದು ಇಬ್ಬರಿಗೂ ಮರೆತು ಹೋಗಿರುತ್ತದೆ. ಜೀವನದಲ್ಲಿ ಅದೊಂದು ಸ್ವೀಟ್ ಫೇಸ್ ಆದರೆ ಅದು ಮುಗಿದ ಅಧ್ಯಾಯ ಈಗ ಹೊಸ ಅಧ್ಯಾಯ ಆರಂಭವಾಗಿದೆ ಅದನ್ನು ಎಂಜಾಯ್ ಮಾಡಬೇಕು ಎಂದು ಅಂದುಕೊಳ್ತಾರೆ. ಆದರೆ ಈ ಮಧ್ಯೆ ಗಂಡ ಹೆಂಡತಿಯ ನಡುವಿನ ಪ್ರೀತಿ ಕಣ್ಮರೆಯಾಗೋದನ್ನು ಗಮನಿಸೋಕೆ ಟೈಮ್ ಇರೋದಿಲ್ಲ..
ಮೊನ್ನೆಯಷ್ಟೇ ವಿಡಿಯೋವೊಂದನ್ನು ನೋಡಿದೆ.. ನಮ್ಮ ದೇಶದಲ್ಲಿ ಈ ರೀತಿ ಸಾಕಷ್ಟು ಪೋಷಕರು ಇದ್ದಾರಲ್ವಾ ಎನಿಸಿತು, ಅದಕ್ಕಿಂತ ಹೆಚ್ಚಾಗಿ, ನಮ್ಮ ಸುತ್ತಮುತ್ತ ಇರುವ ಎಷ್ಟೋ ಪೋಷಕರು ಹೀಗೆ ಇದ್ದಾರೆ ಎಂದೆನಿಸಿತು. ವಿಡಿಯೋದಲ್ಲಿ ಆಂಕರ್ ಒಬ್ಬರು ನೀವು ಲೈನ್‌ನಲ್ಲಿ ನಿಲ್ಲಿ ಎಂದು ಫ್ಯಾಮಿಲಿಯೊಂದಕ್ಕೆ ಹೇಳುತ್ತಾರೆ. ಅಪ್ಪ,ಅಮ್ಮ, ಮಗ ಹಾಗೂ ಮಗಳು ಇರುವ ಮುದ್ದಾದ ಫ್ಯಾಮಿಲಿ ಸ್ಟೇಜ್ ಮೇಲೆ ಬಂದು ನಿಲ್ಲುತ್ತದೆ. ಅಪ್ಪ, ಅಪ್ಪನ ಪಕ್ಕ ಮಗಳು, ಮಗಳ ಪಕ್ಕ ಮಗ, ಮಗನ ಪಕ್ಕಅಮ್ಮ ಹೀಗಿತ್ತು ಅವರ ಅರೇಂಜ್‌ಮೆಂಟ್.
ಆಗ ಹೋಸ್ಟ್ ಹೇಳುತ್ತಾರೆ, ಇದೇ ನಿಮ್ಮ ಫ್ಯಾಮಿಲಿ ಸಮಸ್ಯೆ, ಮಕ್ಕಳನ್ನು ನಿಮ್ಮ ಮಧ್ಯೆ ತಂದು ನಿಲ್ಲಿಸಿಕೊಳ್ತೀರಿ.. ಮಕ್ಕಳು ಆಗುವ ಮುನ್ನ ನೀವಿಬ್ಬರೂ ಒಂದೇ ಆಗಿದ್ದಿರಿ.. ಹೀಗೆ ಇದ್ದಾಗ ನಿಮ್ಮ ಮಕ್ಕಳು ಓದೋಕೆ ಹೋದರೆ ಅಥವಾ ಫಾರೀನ್‌ಗೆ ಹೋದಾಗ ಮನೆಯಲ್ಲಿ ನೀವಿಬ್ಬರೇ ಉಳಿಯುತ್ತೀರಿ, ಆದರೆ ನೀವಿಬ್ಬರೂ ಸ್ಟ್ರೇಂಜರ್ಸ್ ಆಗಿರುತ್ತೀರಿ.. ಹೆಸರಿಗಷ್ಟೇ ಗಂಡ ಹೆಂಡತಿ..
ನೀವೇ ಸುತ್ತಮುತ್ತ ಗಮನಿಸಿ.. ನಲವತ್ತು, ಐವತ್ತು ವರ್ಷದ ತಂದೆ ತಾಯಿ ಒಟ್ಟಿಗೇ ಮಲಗೋದಿಲ್ಲ, ಗಂಡ ಒಂದು ಕಡೆ ಹೆಂಡತಿ ಒಂದು ಕಡೆ.. ಅವರು ಹಗ್ ಮಾಡಿರೋದನ್ನು ನೀವು ನೋಡಿಯೂ ಇಲ್ಲ, ಕೆನ್ನೆಗೊಂದು ಸಿಹಿಮುತ್ತು ಕೊಟ್ಟಿದ್ದು, ಕನಸಿನಲ್ಲಿಯೂ ಇಮ್ಯಾಜಿನ್ ಮಾಡಿಲ್ಲ. ಗಂಡನಿಗೆ ಏನು ಇಷ್ಟ, ಏನು ಇಷ್ಟ ಇಲ್ಲ ಗೊತ್ತಿದೆ, ಹೆಂಡತಿಗೆ ಯಾವ ವಿಷಯಕ್ಕೆ ಕೋಪ ಬರುತ್ತದೆ, ಯಾವಾಗ ಬೇಸರವಾಗುತ್ತದೆ ಗೊತ್ತಿದೆ ಅಷ್ಟೆ ಬಿಟ್ಟರೆ ಬೇರೆ ಕೆಮಿಸ್ಟ್ರಿಯೇ ಇಲ್ಲ.
ಮಕ್ಕಳಾದ ನಂತರ ಅವರ ಲಾಲನೆ ಪಾಲನೆಯಲ್ಲಿ ಹೆಚ್ಚು ಸಮಯ ಹೋಗುತ್ತದೆ, ಇನ್ನು ಇಬ್ಬರೇ ಏಕಾಂತವಾಗಿ ಇರದ ಕಾರಣ, ಮಲಗುವ ಮುನ್ನ ನಾಲ್ಕು ಮಾತು ಆಡದೇ ಇರದ ಕಾರಣ ಅವರು ನಿಮಗೆ ಹತ್ತಿರವಿದ್ದೂ ದೂರವಾಗ್ತಾರೆ.. ಈ ಗ್ಯಾಪ್ ನಿಮ್ಮ ಮಧ್ಯೆ ಬರೋದಕ್ಕೆ ಬಿಡಬೇಡಿ. ಸದಾ ಪ್ರೀತಿಯಿರಲಿ. ನಿಮ್ಮ ಮಕ್ಕಳು ನಿಮ್ಮನ್ನು ನೋಡಿ ಜೋಡಿ ಎಂದರೆ ಹೀಗಿರಬೇಕು ಎನ್ನುವಂತೆ ಬದುಕಿ. ಪ್ರೀತಿ, ವಿಶ್ವಾಸ, ಚೇಷ್ಠೆ, ಮುದ್ದು, ಹುಸಿಮುನಿಸು, ಎಳೆಕೋಪ ಇಲ್ಲದ ಸಂಬಂಧ, ಎಂಥ ಸಂಬಂಧ ಹೇಳಿ..?