Monday, November 28, 2022

Latest Posts

ಕೈಕೊಟ್ಟ ಚೀನಾ, ಶ್ರೀಲಂಕಾಕ್ಕೆ ಐಎಂಎಫ್ ಸಹಾಯ ದುಸ್ತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದ್ವೀಪ ರಾಷ್ಟ್ರ ಶ್ರೀಲಂಕಾ ಹಣಕಾಸಿನ ಬಿಕ್ಕಟ್ಟು ಹಾಗೂ ರಾಜಕೀಯ ಪ್ರಕ್ಷುಬ್ದತೆಗಳಿಂದ ಕುಸಿದು ಹೋಗಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ ಐಎಂಎಂಫ್‌ ನಿಂದ ಅಗತ್ಯ ಹಣಕಾಸಿನ ನೆರವನ್ನು ಎದುರು ನೋಡುತ್ತಿದೆ. ಆದರೆ, ಲಂಕಾ ಸಾಲವನ್ನು ಪಡೆಯಲು ಅದರ ಮಿತ್ರರಾಷ್ಟ್ರ ಚೀನಾವೇ ಅಡ್ಡಿಯಾಗುತ್ತಿದೆ.
ಐಎಂಎಂಫ್‌ ಗಡುವಿನಂತೆ ಶ್ರೀಲಂಕಾ ಡಿಸೆಂಬರ್‌ ಅಂತ್ಯದೊಳಗೆ ಸಾಲವನ್ನು ಪಡೆಯುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಹೀಗಾಗಬೇಕಿದ್ದಲ್ಲಿ ಐಎಂಎಫ್ ನ ಪ್ರಮುಖ ರಾಷ್ಟ್ರಗಳೊಂದಿಗೆ ಲಂಕಾ ಸಮನ್ವಯ ಸಾಧಿಸಬೇಕು. ಈ ನಿಟ್ಟಿನಲ್ಲಿ ಕೊಲಂಬೋ ಭಾರತ ಮತ್ತು ಜಪಾನ್ ಜೊತೆಗೆ ಈಗಾಗಲೇ ಸಂವಾದ ಪ್ರಾರಂಭಿಸಿದೆ. ಆದರೆ ಮತ್ತೊಂದು ಪ್ರಮುಖ ದೇಶ ಚೀನಾ ಆಂತರಿಕವಾಗಿ 20 ನೇ ರಾಷ್ಟ್ರೀಯ ಪಕ್ಷದ ಕಾಂಗ್ರೆಸ್‌ ಸಮಾವೇಶದ ಆಯೋಜನೆಯಲ್ಲಿ ವ್ಯಸ್ತವಾಗಿರುವುದರಿಂದ ಶ್ರೀಲಂಕಾ ಜೊತೆಗೆ ಮಾತುಕತೆಗೆ ಸಿಗುತ್ತಿಲ್ಲ. ಹೀಗಾಗಿ ಶ್ರೀಲಂಕಾ ಡಿಸೆಂಬರ್‌ನಲ್ಲಿ ತನಗೆ ಹೆಚ್ಚು ಅಗತ್ಯವಿರುವ ಐಎಂಎಫ್ ಸಾಲವನ್ನು ಪಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ವಾಷಿಂಗ್ಟನ್ ಮೂಲದ ಹಣಕಾಸು ವಿಶ್ಲೇಷಕರ ಪ್ರಕಾರ, ಶ್ರೀಲಂಕಾ ಚೀನಾದಿಂದಾಗಿ ಐಎಂಎಫ್‌ ನೀಡಿರುವ ಡಿಸೆಂಬರ್ ಗಡುವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಹೀಗಾದಲ್ಲಿ ಲಂಕೆ 2.9 ಶತಕೋಟಿ ಸಾಲವನ್ನು ಪಡೆಯಲು ಮುಂದಿನ ಮಾರ್ಚ್ 2023 ರವರೆಗೆ ಕಾಯಬೇಕಾಗುತ್ತದೆ. ಈ ನಡುವೆ ವಿದೇಶೀ ವಿನಿಮಯ ನಷ್ಟ, ದೊಡ್ಡಮಟ್ಟದ ಆರ್ಥಿಕ ಹಿಂಜರಿತ ಮತ್ತು ಬೆಳೆಯುತ್ತಿರುವ ಹಣಕಾಸಿನ ಕೊರತೆಯಿಂದಾಗಿ ಶ್ರೀಲಂಕಾದ ಸಾಲವು ಮತ್ತಷ್ಟು ಹೆಚ್ಚಾಗಿದೆ. 2021 ರ ಅಂತ್ಯದಿಂದ ಏರುತ್ತಿರುವ ಹಣದುಬ್ಬರವು ದೇಶೀಯ ಸಾಲದ ನೈಜ ಮೌಲ್ಯವನ್ನು ಗಣನೀಯವಾಗಿ ಕಡಿಮೆ ಮಾಡಿದೆ.
2021 ರ ಅಂತ್ಯದ ವೇಳೆಗೆ ದ್ವೀಪ ರಾಷ್ಟ್ರದ ಒಟ್ಟು ಸಾಲವು 36 ಶತಕೋಟಿ ಅಮೆರಿಕನ್‌ ಡಾಲರ್‌ ನಷ್ಟಾಗಿತ್ತು. ಇದರಲ್ಲಿ, ಶ್ರೀಲಂಕಾ ಚೀನಾ ಜೊತೆಗೆ 7.1 ಶತಕೋಟಿ ಡಾಲರ್ ( 20 ಪ್ರತಿಶತದಷ್ಟು) ಸಾಲವನ್ನು ಹೊಂದಿದೆ. 2021 ರ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಜಿಡಿಪಿಯ 115.3 ಪ್ರತಿಶತದಷ್ಟಿದ್ದ ಒಟ್ಟು ಸಾರ್ವಜನಿಕ ಸಾಲವು ಈಗ ಜೂನ್ 2022 ರ ಅಂತ್ಯದ ವೇಳೆಗೆ ಜಿಡಿಪಿಯ ಯ ಶೇಕಡಾ 143.7 ಕ್ಕೆ ಏರಿದೆ. ಇದರಲ್ಲಿ ದ್ವಿಪಕ್ಷೀಯ ಸಾಲವು ಜಿಡಿಪಿಯ ಯ 12.7 ಶೇಕಡಾಕ್ಕೆ ಏರಿದೆ.  ʼಡಿಸೆಂಬರ್‌ನೊಳಗೆ ಪ್ರಮುಖ ದೇಶಗಳೊಂದಿಗೆ ಒಪ್ಪಂದ ಸಾಧ್ಯವಾದರೆ ನಮಗೆ ಲಾಭದಾಯಕವಾಗುತ್ತಿದೆ. ಆದಾಗ್ಯೂ, ಚೀನಾ ಆಂತರಿಕವಾಗಿ ಪಕ್ಷದ ಸಮ್ಮೇಳನವಿದೆ ಎಂಬ ಸರಳ ಕಾರಣ ನೀಡಿ ನಮ್ಮೊಂದಿಗಿನ ಮಾತುಕತೆ ಸ್ಥಗಿತಗೊಳಿಸಬಹುದೇ? ಎಂದು ಬೇಸರಿಸುತ್ತಾರೆ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!