ಕೋವಿಡ್-19 ಪ್ರಕರಣಗಳ ನಿಖರ ಸಂಖ್ಯೆಯ ಪತ್ತೆಹಚ್ಚುವುದು ಅಸಾಧ್ಯ ಎನ್ನುತ್ತಿದೆ ಚೀನಾ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೀನಾ ಸರ್ಕಾರವು ತನ್ನ ಶೂನ್ಯ-ಕೋವಿಡ್ ನೀತಿಯನ್ನು ಕೈಬಿಟ್ಟಿರುವುದರಿಂದ, ದೇಶದಲ್ಲಿ ಕೋವಿಡ್ ಪ್ರಕರಣಗಳ ನಿಖರ ಸಂಖ್ಯೆಯನ್ನು ಪತ್ತೆಹಚ್ಚಲು ಈಗ ಅಸಾಧ್ಯವಾಗಿದೆ ಎಂದು ಚೀನಾದ ಉನ್ನತ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.ಕಡ್ಡಾಯ ಕೋವಿಡ್ ಪರೀಕ್ಷೆಗಳ ನಿರ್ಬಂಧನವನ್ನು ತೆಗೆದು ಹಾಕುವುದು ಸೇರಿದಂತೆ ಸರ್ಕಾರದ ಅನೇಕ ಕೋವಿಡ್ ನಿಯಂತ್ರಣಗಳು ಕೊನೆಗೊಂಡಿರುವುದರಿಂದ, ವರದಿಯಾದ ಪ್ರಕರಣಗಳ ಸಂಖ್ಯೆಯು ಇನ್ನು ಮುಂದೆ ನಿಜವಾದ ಸೋಂಕಿನ ಸಂಖ್ಯೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಬುಧವಾರ ಹೇಳಿದೆ.

“ಅನೇಕ ಲಕ್ಷಣರಹಿತ ಜನರು ಇನ್ನು ಮುಂದೆ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಯಲ್ಲಿ ಭಾಗವಹಿಸುತ್ತಿಲ್ಲ, ಆದ್ದರಿಂದ ಲಕ್ಷಣರಹಿತ ಸೋಂಕಿತ ಜನರ ನಿಜವಾದ ಸಂಖ್ಯೆಯನ್ನು ಗ್ರಹಿಸುವುದು ಅಸಾಧ್ಯ” ಎಂದು ರಾಷ್ಟ್ರೀಯ ಆರೋಗ್ಯ ಆಯೋಗವನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಬುಧವಾರ, ಚೀನಾ 2,249 “ದೃಢೀಕರಿಸಿದ” ಕೋವಿಡ್ ಸೋಂಕುಗಳನ್ನು ವರದಿ ಮಾಡಿದೆ. ಇದು ದೇಶದ ಒಟ್ಟು ಸೋಂಕಿತರ ಸಂಖ್ಯೆಯನ್ನು 369,918 ಕ್ಕೆ ಏರಿಸಿದೆ. ಅಕ್ಟೋಬರ್‌ ತಿಂಗಳಿಗೆ ಹೋಲಿಸಿದಿದರೆ ಇದು ದ್ವಿಗುಣವಾಗಿದೆ. ಇದು ಪ್ರಸ್ತುತ ಟ್ರ್ಯಾಕ್ ಮಾಡದ ಲಕ್ಷಣರಹಿತ ಪ್ರಕರಣಗಳನ್ನು ಒಳಗೊಂಡಿಲ್ಲ. ಸಾಂಕ್ರಾಮಿಕ ರೋಗದ ಉಸ್ತುವಾರಿ ವಹಿಸಿರುವ ಚೀನಾದ ಉನ್ನತ ಅಧಿಕಾರಿ ಸನ್ ಚುನ್ಲಾನ್ ಬುಧವಾರ ಆಸ್ಪತ್ರೆಗಳಿಗೆ ಭೇಟಿ ನೀಡಿ ರಾಜಧಾನಿ ಬೀಜಿಂಗ್‌ ನಲ್ಲಿ ಏಕಾಏಕಿ ಪ್ರಕರಣಗಳು ಹೆಚ್ಚಾಗಿವೆ ಎಂದಿದ್ದಾರೆ.

ಸೋಂಕುಗಳನ್ನು ತಡೆಗಟ್ಟುವ ಸಲುವಾಗಿ ವೈರಸ್‌ನಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ದೇಶದ ಗಮನವನ್ನು ಬದಲಾಯಿಸಬೇಕಾಗಿದೆ ಎಂದು ಚುನ್ಲಾನ್ ವಿವರಿಸಿದ್ದಾರೆ, ಹಿಂದಿನ ನಿಯಮಗಳಿಗಿಂತ ಭಿನ್ನವಾದ ನಿಯಮಗಳನ್ನು ಈಗ ಅನುಸರಿಸಲಾಗುತ್ತಿದ್ದು ಇದು ಸೋಂಕುಗಳನ್ನು ಕೊನೆಗೊಳಿಸುವ ಸಲುವಾಗಿ ಸೋಂಕಿತರನ್ನು ಕಟ್ಟುನಿಟ್ಟಾಗಿ ಪ್ರತ್ಯೇಕಿಸುತ್ತದೆ. ರಾಜಧಾನಿಯ ಸುತ್ತಲೂ ಹೆಚ್ಚಿನ ಜ್ವರ ಚಿಕಿತ್ಸಾಲಯಗಳನ್ನು ತೆರೆಯಲು ಚುನ್ಲಾನ್ ಕರೆ ನೀಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!