ಟಿಬೆಟಿಯನ್ ಸನ್ಯಾಸಿಗಳನ್ನು ಎದುರು ನಿಲ್ಲಿಸಿಕೊಂಡೇ ಬುದ್ಧನ ಪ್ರತಿಮೆಗಳನ್ನು ನೆಲಕ್ಕುರುಳಿಸಿದ ಚೀನಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಚುವಾನ್ ಪ್ರಾಂತ್ಯದ ಡ್ರ್ಯಾಗೋದಲ್ಲಿ ಚೀನಾ ಅಧಿಕಾರಿಗಳು 99 ಅಡಿ ಎತ್ತರದ ಬುದ್ಧನ ಪ್ರತಿಮೆ ಮತ್ತು 45 ಪ್ರಾರ್ಥನಾ ಚಕ್ರಗಳನ್ನು ನಾಶಪಡಿಸಿದ್ದಾರೆ. ಇಂಥದೊಂದು ಮಾಹಿತಿ ಕೆಲವು ಮೂಲಗಳಿಂದ ಜಗತ್ತಿನೆದುರು ಬಂದಿದೆ. ಈಗ ಮಾಹಿತಿ ಸೋರಿಕೆ ಮಾಡಿದ್ದಕ್ಕಾಗಿ ಟಿಬೆಟಿಯನ್ ಸನ್ಯಾಸಿಗಳನ್ನು ಥಳಿಸಿ ಬಂಧಿಸಲಾಗಿದೆ.

ಡಿ.12 ರಿಂದ ಒಂಬತ್ತು ದಿನಗಳ ಕಾಲ ಪವಿತ್ರ ಬುದ್ಧನ ಪ್ರತಿಮೆಯನ್ನು ನಾಶಪಡಿಸಿದ್ದು, ಪ್ರತಿಮೆ ಉರುಳುವುದನ್ನು ಕಣ್ಣಾರೆ ನೋಡಿ ಎಂದು ಸ್ಥಳೀಯ ಟಿಬೆಟಿಯನ್ ಸನ್ಯಾಸಿಗಳಿಗೆ ಹಾಗೂ ನಮ್ಗ್ಯಾಲ್ ಲಿಂಗ್ ಮಠದ ಸನ್ಯಾಸಿಗಳಿಗೆ ಚೀನಾ ಅಧಿಕಾರಿಗಳು ಒತ್ತಾಯಿಸಿದ್ದಾರೆ.

ತುಂಬಾ ಎತ್ತರದಲ್ಲಿ ಪ್ರತಿಮೆ ನಿರ್ಮಾಣವಾಗಿದೆ ಎನ್ನುವ ಅಧಿಕೃತ ದೂರಿನ ನಂತರ ಪ್ರತಿಮೆ ಉರುಳಿಸಲಾಗಿದೆ. ಆದರೆ ಸಿಚುವಾನ್ ಪ್ರಾಂತ್ಯದ ಅಧಿಕಾರಿಗಳು ಟಿಬೆಟಿಯನ್ ಸನ್ಯಾಸಿಗಳು ಮತ್ತು ಇತರ ನಿವಾಸಿಗಳಿಗೆ ಬುದ್ಧನ ಪ್ರತಿಮೆ ಬೀಳಿಸುವುದನ್ನು ನೋಡಿ ಎಂದು ಒತ್ತಾಯಿಸಿದ್ದಾರೆ.

ದೈತ್ಯ ಬುದ್ಧನ ಪ್ರತಿಮೆಯನ್ನು ನಿರ್ಮಿಸಲು ನಮ್ಮ ಬಳಿ ಎಲ್ಲಾ ಕಾನೂನು ದಾಖಲೆಗಳಿವೆ. ಪ್ರತಿಮೆ ನಿರ್ಮಾಣವಾದ ಆರು ವರ್ಷಗಳ ನಂತರ ಅಧಿಕಾರಿಗಳು ಅದನ್ನು ಕೆಡವಿದ್ದಾರೆ ಎಂದು ಉರುಳುವಿಕೆ ವೀಕ್ಷಿಸಲು ಒತ್ತಾಯಿಸಲ್ಪಟ್ಟ ಸನ್ಯಾಸಿಗಳು ದೂರಿದ್ದಾರೆ.

ಕ್ಷಾಮ, ಯುದ್ಧ, ಬೆಂಕಿ, ನೀರು, ಭೂಮಿ ಮತ್ತು ಗಾಳಿಯ ದುರಂತಗಳನ್ನು ತಪ್ಪಿಸಲು, ಶಾಂತಿ ಸ್ಥಾಪಿಸಲು 2015 ರಲ್ಲಿ ಪ್ರತಿಮೆ ನಿರ್ಮಿಸಲಾಗಿತ್ತು. ಇದಕ್ಕೆ ಡ್ರ್ಯಾಗೋ ದೇಶದ ಖಾಮ್‌ನ ಸ್ಥಳೀಯ ಟಿಬೆಟಿಯನ್ ಸನ್ಯಾಸಿಗಳು ಆರ್ಥಿಕ ಸಹಾಯ ಮಾಡಿದ್ದರು.

ಲೇಖಕ ಬ್ರಹ್ಮ ಚೆಲ್ಲಾನಿ ಅವರು ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದಿರೋದು ಹೀಗೆ- “ಚೀನಾ ತಾಲಿಬಾನ್ ಹಾದಿಯಲ್ಲಿ ಸಾಗುತ್ತಿದೆ. ತಾಲಿಬಾನಿಗಳು ಈ ಹಿಂದೆ ಆರನೇ ಶತಮಾನದಲ್ಲಿ ನಿರ್ಮಿಸಲಾದ ಎರಡು ಬೃಹತ್ ಬುದ್ಧನ ಪ್ರತಿಮೆಗಳನ್ನು ನಾಶಪಡಿಸಿದ್ದರು. ಅಫ್ಘಾನಿಸ್ತಾನದಲ್ಲಿ ಲೆಕ್ಕವಿಲ್ಲದಷ್ಟು ಧಾರ್ಮಿಕ ಕಲಾಕೃತಿಗಳನ್ನು ನಾಶಮಾಡಿದ್ದಾರೆ. ಇದೇ ಮಾದರಿಯಲ್ಲಿ ಈಗ ಚೀನಾ ಟಿಬೆಟಿಯನ್ ಸಂಸ್ಕೃತಿಯನ್ನು ತೊಡೆದುಹಾಕಲು ಹೊರಟಿದೆ.”

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!