ಕಾಂಗ್ರೆಸ್‌ ನದ್ದು ಪಾದಯಾತ್ರೆಯಲ್ಲ, ಸುಳ್ಳಿನ ಜಾತ್ರೆ: ಕಾಂಗ್ರೆಸ್‌- ಬಿಜೆಪಿ ಟ್ವಿಟರ್‌ ವಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಕೋವಿಡ್‌ ಬಿಸಿ ಚರ್ಚೆ ನಡುವೆ ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ ನ ಪಾದಯಾತ್ರೆ ನಡೆಸುವ ಬಗ್ಗೆಯೂ ಭಾರೀ ಸದ್ದು ಕೇಳಿ ಬರುತ್ತಿದೆ. ಕಾಂಗ್ರೆಸ್‌ ನ ಪಾದಯಾತ್ರೆಯ ನಡೆಯನ್ನು ಬಿಜೆಪಿ ಕರ್ನಾಟಕ ಸರಣಿ ಟ್ವೀಟ್‌ ಮೂಲಕ ಟೀಕೆ ಮಾಡಿದೆ.

ಅಂತಾರಾಜ್ಯ ಜಲ ವಿವಾದ ಸಂದರ್ಭದಲ್ಲಿ ವಿವೇಕಯುತ ಹೋರಾಟ ಅಗತ್ಯವಿದೆ ಎಂದು ಇತಿಹಾಸ ಕಲಿತಿಲ್ಲವೇ? ಈ‌ ಹಿಂದೆ ಕಾವೇರಿ ಪಾದಯಾತ್ರೆ ನಡೆಸಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಘಟನೆ ನೆನಪಿರಬೇಕಲ್ಲವೇ? ರಾಜಕೀಯಕ್ಕಾಗಿ ರಾಜ್ಯದ ಮರ್ಯಾದೆಯನ್ನೇಕೆ ಹರಾಜು ಹಾಕುತ್ತಿದ್ದೀರಿ? ಎಂದು ಬಿಜೆಪಿ ಪ್ರಶ್ನಿಸಿದೆ.

ಮೇಕೆದಾಟು ಯೋಜನೆಗೆ ನಾಳೆಯೇ ಭೂಮಿಪೂಜೆ ನಡೆಸಿ ಎಂದು ಅಬ್ಬರಿಸುತ್ತಿರುವ ಕಾಂಗ್ರೆಸ್ ನಾಯಕರೇ ನಮ್ಮ ಪ್ರಶ್ನೆಗೆ ಉತ್ತರಿಸಿ. ಮೇಕೆದಾಟು ಯೋಜನೆ ಸಂಬಂಧ ಅನಗತ್ಯ ಕಾಲಹರಣ ಮಾಡಿದ್ದು ಯಾರು? ಅಧಿಕಾರದಲ್ಲಿದ್ದಾಗ ಕಡತಯಜ್ಞ ಮಾಡದೆ, ವಿರೋಧ ಪಕ್ಷವಾದಾಗ ಆಂದೋಲನ ನಡೆಸುವುದು ಎಷ್ಟು ಸರಿ? ಎಂದಿದೆ.

ಅಂತಾರಾಜ್ಯ ಜಲ ವಿವಾದ ಒಂದು ಸೂಕ್ಷ್ಮ ವಿಚಾರ. ಕರ್ನಾಟಕ ಸರ್ಕಾರ ಈ ಸಂಬಂಧ ಎಚ್ಚರಿಕೆ ಹಾಗೂ ವಿವೇಕದ ಹೆಜ್ಜೆ ಇಡುತ್ತಲೇ ಬಂದಿದೆ. ಸಂಘರ್ಷದಿಂದ ವ್ಯಾಜ್ಯ ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ಸಿಗರು #ಸುಳ್ಳಿನಜಾತ್ರೆ ಮಾಡುವ ಬದಲು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ತಮ್ಮ ಮಿತ್ರಪಕ್ಷ ಹಸಿರುಪೀಠದಲ್ಲಿ ಹೂಡಿದ ದಾವೆ ವಾಪಾಸ್ ತೆಗೆಸಲಿ ಎಂದು ಆಗ್ರಹಿಸಿದೆ.

2014 ರಿಂದ 2018 ರ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇಕೆದಾಟು ವಿಚಾರದಲ್ಲಿ ಎಸಗಿದ ಐತಿಹಾಸಿಕ ಪ್ರಮಾದದಿಂದ ಈಗ ಕಾವೇರಿ ಕಣ್ಣೀರು ಸುರಿಸುವಂತಾಗಿದೆ. ಕೇಂದ್ರದಿಂದ ಒಪ್ಪಿಗೆ ಹಾಗೂ ಅನುದಾನ ಪಡೆಯುವಾಗ ನಿದ್ದೆಗೆ ಜಾರಿ ಈಗ ಪಾದಯಾತ್ರೆಯ ನಾಟಕವಾಡುವುದಕ್ಕೆ ನಾಚಿಕೆಯಾಗುವುದಿಲ್ಲವೆ? ಎನ್ನುವ ಮೂಲಕ ಬಿಜೆಪಿ ಆರೋಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!