ಚೀನಾದಿಂದ ಭಾರತದ ಮೇಲೆ ಅತಿಕ್ರಮಣ: ರಾಹುಲ್ ಮಾತಿಗೆ ತಿರುಗೇಟು ಕೊಟ್ಟ ರಾಜನಾಥ್ ಸಿಂಗ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಭಾರತ-ಚೀನಾ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ರಕ್ಷಣಾ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಸೇನಾ ಮುಖ್ಯಸ್ಥರು ಹೇಳಿದ್ದಾರೆ ಎನ್ನುವ ಮೂಲಕ ರಾಹುಲ್​ ಗಾಂಧಿಯವರು ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಬೇಜವಾಬ್ದಾರಿ ರಾಜಕೀಯ ಮಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.

ಸೋಮವಾರ ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಚರ್ಚೆಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ ಅವರು, ಚೀನಾದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ನಿರಾಕರಣೆಯ ಹೊರತಾಗಿಯೂ, ಚೀನಾದ ಪಡೆಗಳು ಭಾರತೀಯ ಪ್ರದೇಶವನ್ನು ಆಕ್ರಮಿಸಿಕೊಂಡಿವೆ ಎಂದು ಅವರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ರಾಜನಾಥ್ ಸಿಂಗ್ ಅವರು, ರಾಹುಲ್ ಗಾಂಧಿಯವರು ಫೆಬ್ರವರಿ 03, 2025 ರಂದು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿಯ ಕುರಿತು ಸೇನಾ ಮುಖ್ಯಸ್ಥರ ಹೇಳಿಕೆಯ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಸೇನಾ ಮುಖ್ಯಸ್ಥರ ಹೇಳಿಕೆಗಳು ಎರಡೂ ಕಡೆಯ ಸಾಂಪ್ರದಾಯಿಕ ಗಸ್ತು ತಿರುಗುವಿಕೆಯ ಅಡಚಣೆಯನ್ನು ಮಾತ್ರ ಉಲ್ಲೇಖಿಸಿವೆ. ಆದರೆ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿ ಸುಳ್ಳು ಹೇಳುತ್ತಿರುವ ರಾಹುಲ್‌ ಗಾಂಧಿ ಅವರಿಗೆ ನಾಚಿಕೆಯಾಗಬೇಕು ಎಂದು ರಾಜನಾಥ್ ಸಿಂಗ್ ಕಿಡಿ ಕಾರಿದ್ದಾರೆ.

ರಾಹುಲ್ ಗಾಂಧಿಯವರ ಆರೋಪಗಳನ್ನು ನಿರಾಕರಿಸಿದ ರಕ್ಷಣಾ ಸಚಿವರು, ಚೀನಾ ಸೈನಿಕರು ಆಗಾಗ ಗಡಿಯಲ್ಲಿ ಭಾರತೀಯ ಸೈನಿಕರ ಗಸ್ತು ತಿರುಗುವಿಕೆ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಲೇ ಇರುತ್ತಾರೆ. ಆದರೆ ಸೇನಾ ಮುಖ್ಯಸ್ಥರು ಎಲ್ಲಿಯೂ ಭಾರತದ ಭೂಪ್ರದೇಶವನ್ನು ಚೀನೀ ಪಡೆಗಳು ಅತಿಕ್ರಮಣ ಮಾಡಿವೆ ಎಂದು ಹೇಳಿಲ್ಲ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೇನಾ ಮುಖ್ಯಸ್ಥರು ಚೀನಾ ಅತಿಕ್ರಮಣದ ಬಗ್ಗೆ ಮಾತನಾಡಿಲ್ಲ. ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ರಾಹುಲ್‌ ಗಾಂಧಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ತೀವ್ರ ವಿಷಾದನೀಯ. ಗಡಿಯಲ್ಲಿ ಭಾರತೀಯ ಸೈನಿಕರ ಗಸ್ತು ತಿರುಗುವಿಕೆ ಪ್ರಕ್ರಿಯೆಗೆ ಚೀನಾ ಸೈನಿಕರು ಅಡ್ಡಿಪಡಿಸುವ ಕುರಿತು, ರಕ್ಷಣಾ ಇಲಾಖೆ ಈಗಾಗಲೇ ಸಂಸತ್ತಿಗೆ ಮಾಹಿತಿ ನೀಡಿದೆ. ಆದರೆ ರಾಹುಲ್‌ ಗಾಂಧಿ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ತಿರುಚಿ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!