ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವರು ಬೆಟ್ಟಿಂಗ್‌ಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಅಂಥದ್ದೇ ಘಟನೆಯೊಂದು ಇದೀಗ ಬೆಳಗಿಗೆ ಬಂದಿದೆ. 10 ನಿಮಿಷದಲ್ಲಿ ಒಂದು ಲೀಟರ್ ಮದ್ಯ ಸೇವಿಸಿದ ಉದ್ಯೋಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಚೀನಾದ ಕಂಪನಿಯೊಂದರ ಉದ್ಯೋಗಿಗಳು ಕಚೇರಿಯಲ್ಲಿ ಪಾರ್ಟಿ ಮಾಡಿದ್ದಾರೆ. ಆ ಪಾರ್ಟಿಯಲ್ಲಿ ಮದ್ಯ ಸೇವಿಸುವ ಮುನ್ನ ಕಂಪನಿಯ ಮುಖ್ಯಸ್ಥರು ಹಾಗೂ ಉದ್ಯೋಗಿಗಳ ನಡುವೆ ಬೆಟ್ಟಿಂಗ್ ನಡೆದಿತ್ತು.
ಈ ವೇಳೆ 10 ನಿಮಿಷದಲ್ಲಿ ಒಂದು ಲೀಟರ್ ಮದ್ಯ ಸೇವಿಸಿದವರಿಗೆ 5 ಸಾವಿರರೂ. ಯುವಾನ್ (ಸುಮಾರು ರೂ.58 ಸಾವಿರ) ಬಹುಮಾನ ನೀಡಲು ಮುಂದಾಗಿದ್ದಾರೆ. ಯಾರೂ ಪ್ರತಿಕ್ರಿಯಿಸದ ಕಾರಣ ಹಣ ಹೆಚ್ಚುತ್ತಲೇ ಇತ್ತು, ಕೊನೆಗೆ 20 ಸಾವಿರ ಯುವಾನ್ (ಸುಮಾರು 2.31 ಲಕ್ಷ ರೂ.) ಹಣ ನೀಡುವುದಾಗಿ ಘೋಷಿಸಿದ್ದರಿಂದ ಜಾಂಗ್ ಎಂಬ ಉದ್ಯೋಗಿ ಮದ್ಯ ಸೇವಿಸಲು ಮುಂದಾದರು.
ಒಂದು ಲೀಟರ್ ಮದ್ಯದ ಬಾಟಲಿಯನ್ನು ಕೆಳಗಿಳಿಸದೆ ಕುಡಿದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಜಾಂಗ್ ಪ್ರಜ್ಞೆ ತಪ್ಪಿದ್ದು, ಆತನ ಸಹೋದ್ಯೋಗಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಜಾಂಗ್‌ನ ಪ್ರಾಣಪಕ್ಷಿ ಹಾರಿಹೋಗಿತ್ತು. ಅತಿಯಾಗಿ ಮದ್ಯ ಸೇವಿಸಿದ್ದರಿಂದ ಆಲ್ಕೋಹಾಲ್ ವಿಷ, ನ್ಯುಮೋನಿಯಾ, ಉಸಿರುಗಟ್ಟುವಿಕೆ ಮತ್ತು ಹೃದಯ ಸ್ತಂಭನದಿಂದ ಸಾವನ್ನಪ್ಪಿರಬಹುದು ಎಂದು ವೈದ್ಯರು ತಿಳಿಸಿದರು.