ಚೀನಾ ಅಧ್ಯಕ್ಷರ ಹೊಸವರ್ಷದ ಭಾಷಣದಲ್ಲಿದೆಯೇ ಸಂಘರ್ಷದ ಸೂಚನೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಜತೆಗೆ ತೈವಾನ್ ಅನ್ನು ನಿಶ್ಚಿತವಾಗಿ ಮತ್ತೆ “ಒಂದುಗೂಡಿಸಲಾಗುವುದು” ಎಂದು ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ತಮ್ಮ ಹೊಸವರ್ಷದ ಭಾಷಣದಲ್ಲಿ ಹೇಳಿದ್ದಾರೆ. ತೈವಾನ್ ಅನ್ನು ಬೀಜಿಂಗ್ ಮಿಲಿಟರಿ ಬಲದ ಮೂಲಕ ತೆಗೆದುಕೊಳ್ಳುವುದಕ್ಕೆ ಕಾರ್ಯಪ್ರವೃತ್ತವಾಗಿರುವುದರ ಸೂಚನೆ ಇದು ಎಂದು ವೈಸ್ ಆಫ್ ಅಮೆರಿಕ ಎಂಬ ಸುದ್ದಿಮಾಧ್ಯಮವು ತನ್ನ ವ್ಯಾಖ್ಯಾನದೊಂದಿಗೆ ವರದಿ ಮಾಡಿದೆ.

ತೈವಾನ್ ಅನ್ನು ಚೀನಾದಲ್ಲಿ ವಿಲೀನಗೊಳಿಸಿಕೊಳ್ಳುತ್ತೇವೆ ಎಂದು ಅಲ್ಲಿನ ಅಧಿಕಾರಸ್ಥರಿಂದ ಹೇಳಿಕೆ ಬರುತ್ತಿರುವುದು ಇದೇ ಮೊದಲೇನೂ ಅಲ್ಲ. 1949ರ ಅಂತರ್ಯುದ್ಧದಲ್ಲಿ ಚೀನಾದಿಂದ ಬೇರೆ ಆದ ತೈವಾನ್ ಎಂಬ ದ್ವೀಪ ತನ್ನದೇ ಸ್ವಾಯತ್ತ ಆಡಳಿತವನ್ನು ಹೊಂದಿತು. ಇವತ್ತಿಗೆ, ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ ಸಾಧಿಸಿರುವ ಪ್ರಗತಿಯ ಕಾರಣಕ್ಕೆ ತೈವಾನ್ ಎಂಬುದು ಪಾಶ್ಚಾತ್ಯ ರಾಷ್ಟ್ರಗಳಿಗೆ ಆಪ್ತವಾಗಿದೆ. ಇದರ ಪ್ರತ್ಯೇಕ ಅಸ್ತಿತ್ವವು ಜಾಗತಿಕ ಪೂರೈಕೆ ಜಾಲಕ್ಕೆ ಪೂರಕವಾಗಿರುವುದೂ ಹೌದು.

ಆದರೆ, ಈ ಬಾರಿ ಚೀನಾ ಅಧ್ಯಕ್ಷರ ಹೇಳಿಕೆ ಸೃಷ್ಟಿಸಿರುವ ಆತಂಕ ಹೆಚ್ಚಿನದ್ದೇ ಆಗಿದೆ. ಏಕೆಂದರೆ, ಜನವರಿ 13ರಂದು ತೈವಾನ್ ಚುನಾವಣೆ ಹಮ್ಮಿಕೊಂಡಿದೆ. ಇದನ್ನು ಪ್ರಬಲವಾಗಿ ವಿರೋಧಿಸಿರುವ ಚೀನಾ, ಇದು ಯುದ್ಧ ಮತ್ತು ಶಾಂತಿಯ ನಡುವಿನ ಆಯ್ಕೆ ಎಂಬಂಥ ಕಟುಮಾತುಗಳನ್ನಾಡಿದೆ. ತೈವಾನ್ ಚುನಾವಣೆಯಲ್ಲಿ ಅಧ್ಯಕ್ಷೀಯ ಪದವಿಗೆ ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರು ವಿಲಿಯಂ ಲೈ. ಚೀನಾ ಈತನನ್ನು ಪ್ರತ್ಯೇಕತಾವಾದಿ ಎಂದು ಪರಿಗಣಿಸುತ್ತದೆ.

ರಷ್ಯ-ಉಕ್ರೇನ್ ಸಂಘರ್ಷ, ಇಸ್ರೇಲ್-ಹಮಾಸ್ ಸಂಘರ್ಷಗಳು ಜಗತ್ತನ್ನು ಬೇರೆ ಬೇರೆ ರೀತಿಯಲ್ಲಿ ಕಾಡುತ್ತಿರುವಾಗ, 2024ರ ವರ್ಷವು ಇನ್ನೊಂದು ಸಂಘರ್ಷವನ್ನು ನೋಡಲಿದೆಯೇ ಎಂಬುಜು ಈಗ ಜಗತ್ತನ್ನು ಕಾಡುತ್ತಿರುವ ಆತಂಕ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!