ಕ್ವಾಡ್‌ ಸಭೆ ನಡೆಯುವಾಗಲೇ ಉದ್ಧಟತನ: ಜಪಾನ್‌ ವಾಯುನೆಲೆಯತ್ತ ಹಾರಿಬಂದ ಚೀನಾ- ರಷ್ಯಾ ಬಾಂಬರ್‌ ವಿಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕ್ವಾಡ್ ನಾಯಕರು ಟೋಕಿಯೊದಲ್ಲಿ ಭೇಟಿಯಾದ ಸಂದರ್ಭದಲ್ಲಿಯೇ ಚೀನಾ ಮತ್ತು ರಷ್ಯಾದ ಬಾಂಬರ್‌ ವಿಮಾನಗಳು ಮಂಗಳವಾರ ಜಪಾನ್ ವಾಯುನೆಲೆಯ ಬಳಿ ಹಾರಾಟ ನಡೆಸಿದ್ದು ಆತಂಕ ಸೃಷ್ಟಿಸಿತ್ತು.
ಭಾರತ, ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಜಪಾನ್ ನಾಯಕರು ಪ್ರಾದೇಶಿಕ ಭದ್ರತೆಯ ಕುರಿತು ಮಾತುಕತೆ ನಡೆಸುತ್ತಿರುವ ಸಂದರ್ಭದಲ್ಲಿಯೇ ವಿಮಾನಗಳು ಜಪಾನ್‌ ವಾಯುಪ್ರದೇಶದ ಸಮೀಪ ಹಾರಾಟ ನಡೆಸಿದ್ದು ರಷ್ಯಾ ಮತ್ತು ಚೀನಾ ನಡೆ ಕಳವಳ ಮೂಡಿಸಿದೆ ಎಂದು ಜಪಾನ್ ರಕ್ಷಣಾ ಸಚಿವ ನೊಬುವೊ ಕಿಶಿ ಹೇಳಿದರು.
ʼಚೀನಾದ ಎರಡು ಬಾಂಬರ್‌ ವಿಮಾನಗಳು ಜಪಾನ್ ಸಮುದ್ರದಲ್ಲಿ ರಷ್ಯಾದ ಎರಡು ಬಾಂಬರ್‌ಗಳನ್ನು ಸೇರಿಕೊಂಡು ಪೂರ್ವ ಚೀನಾ ಸಮುದ್ರದತ್ತ ಜಂಟಿಯಾಗಿ ಹಾರಾಟ ನಡೆಸಿದವು” ಎಂದು ಕಿಶಿ ಸುದ್ದಿಗಾರರಿಗೆ ತಿಳಿಸಿದರು.
ರಷ್ಯಾದ ಗುಪ್ತಚರ ಮಾಹಿತಿ ಸಂಗ್ರಹಿಸುವ ವಿಮಾನವು ಉತ್ತರ ಹೊಕ್ಕೈಡೋದಿಂದ ಮಧ್ಯ ಜಪಾನ್‌ನ ನೋಟೊ ಪರ್ಯಾಯ ದ್ವೀಪದತ್ತ ಹಾರಾಟ ನಡೆಸಿತು ಎಂದು ಕಿಶಿ ಹೇಳಿದರು. ಟೋಕಿಯೊದಲ್ಲಿ ಶೃಂಗಸಭೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಆ ದೇಶಗಳು ವಿಮಾನಗಳನ್ನು ನಮ್ಮ ದೇಶದತ್ತ ಕಳುಹಿಸಿದ್ದು “ಪ್ರಚೋದನಕಾರಿ” ಎಂದು ರಕ್ಷಣಾ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಕ್ವಾಡ್ ನಾಯಕರು ಮಂಗಳವಾರ ರಷ್ಯಾ ಅಥವಾ ಚೀನಾವನ್ನು ನೇರವಾಗಿ ಉಲ್ಲೇಖಿಸದೆ ” ಜಾಗತಿಕ ಯಥಾಸ್ಥಿತಿಯನ್ನು ಬಲವಂತವಾಗಿ ಬದಲಾಯಿಸುವ” ಕೆಲ ದೇಶಗಳ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದ್ದನ್ನು ಗಮನಿಸಬಹುದು.
“ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣದ ಕುರಿತಾಗಿ ಅಂತಾರಾಷ್ಟ್ರೀಯ ಸಮುದಾಯವು ಪ್ರತಿಕ್ರಿಯಿಸುತ್ತಿದ್ದಂತೆ, ಆಕ್ರಮಣಕಾರಿಯಾಗಿರುವ ರಷ್ಯಾದ ಸಹಯೋಗದೊಂದಿಗೆ ಚೀನಾ ಇಂತಹ ಕ್ರಮ ಕೈಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ.” ಎಂದು ಜಪಾನ್‌ ರಕ್ಷಣಾ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!