ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ, ರಾಷ್ಟ್ರೀಯ ಸಿಖ್ ಸಂಗತ್ ಇದರ ಹಿರಿಯ, ಸರ್ದಾರ ಚಿರಂಜೀವಿ ಸಿಂಗ್ ಇಂದು ದೈವಾಧೀನರಾದರು.
ಪಂಜಾಬ್ ರಾಜ್ಯದಲ್ಲಿ ಸಂಘದ ಕಾರ್ಯ ಬೆಳೆಸುವುದರ ಜೊತೆಗೆ ಪಂಜಾಬನಲ್ಲಿನ ಪ್ರಕ್ಷುಬ್ದ ಸಮಯದಲ್ಲಿ ರಾಷ್ಟ್ರೀಯ ಏಕತೆಗಾಗಿ ಹಗಲಿರುಳು ಶ್ರಮಿಸಿದ ಗಟ್ಟಿ ಜೀವ ಸರ್ದಾರ ಚಿರಂಜೀವಿ ಸಿಂಗ್ ಅವರದ್ದು. 1986ರಲ್ಲಿ ಸರ್ದಾರ ಶಮಶೇರ್ ಸಿಂಗ್ ಅವರಿಂದ ಸ್ಥಾಪಿಸಲ್ಪಟ್ಟ ರಾಷ್ಟ್ರೀಯ ಸಿಖ್ ಸಂಗತ್ ಇದನ್ನು 1990ರಿಂದ ಮುನ್ನಡೆಸಿಕೊಂಡು ಅಷ್ಟೇನೂ ಪೂರಕವಲ್ಲದ ವಾತರವರಣದಲ್ಲೂ ಸಂಘಟನೆಯನ್ನು ಕಟ್ಟಿ ಬೆಳೆಸಿದ ಛಲಜೀವಿ ಸರ್ದಾರ ಚಿರಂಜೀವಿ ಸಿಂಗ್.
ಪಂಜಾಬ್ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲಿ ಸಮಾಜದಲ್ಲಿ ಸಮರಸತೆ ಹಾಗೂ ಶಾಂತಿಯನ್ನು ಸ್ಥಾಪಿಸಲು ಎಲ್ಲ ಮಠಾಧೀಶರನ್ನು ಒಳಗೊಂಡ ’ಸಂತ ಯಾತ್ರೆ’ಯನ್ನು ಸರ್ದಾರ ಚಿರಂಜೀವಿ ಸಿಂಗ್ ಆಯೋಜನೆ ಮಾಡಿ, ಎಲ್ಲ ಸವಾಲುಗಳ ಮಧ್ಯೆ ಅದನ್ನು ಯಶಸ್ವಿಗೊಳಿಸಿದ್ದರು. ಉತ್ತರಾಖಂಡದಲ್ಲಿನ ಬ್ರಹ್ಮಕುಂಡದಿಂದ ಅಮೃತಸರ್ ವರೆಗಿನ ಈ ಯಾತ್ರೆಯನ್ನು ’ಹರಿ ಕೇ ದ್ವಾರ ಸೇ ಹರಮಂದಿರ ತಕ್’ ಎಂಬ ಅವರ ಕಲ್ಪನೆ ನಿಜಕ್ಕೂ ಅಂದಿನ ಪಂಜಾಬಿಗೆ ಅವಶ್ಯವಿದ್ಧ ಸಾಂತ್ವಾನವನ್ನು ನೀಡಿತು.