ಚಿತ್ರದುರ್ಗ| ಸರಸ್ವತಿ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿ ಕಾನೂನು ವೇದಿಕೆ ಉದ್ಘಾಟನೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ಮಾನವೀಯ ಮೌಲ್ಯದ ಜತೆ ಕರ್ತವ್ಯ ಪ್ರಜ್ಞೆ ಬೆಳೆಸಿಕೊಂಡಾಗ ಮಾತ್ರ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಶಿವಮೊಗ್ಗದ ಸಿಬಿಆರ್ ನ್ಯಾಷನಲ್ ಲಾ ಕಾಲೇಜು ಪ್ರಾಂಶುಪಾಲ ಪ್ರೊ.ಜಿ.ಆರ್.ಜಗದೀಶ್ ತಿಳಿಸಿದರು.
ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಕಾನೂನು ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು, ಇದನ್ನು ಯಾವುದೇ ತರಗತಿಯಲ್ಲಿ ಹೇಳಿಕೊಡುವುದಿಲ್ಲ. ನಿಮಗೆ ನೀವೆ ತಿಳಿದುಕೊಳ್ಳಬೇಕು. ಕಾನೂನು ಪದವಿ ಗಳಿಸಿದ್ದೇವೆ ಎಂದು ಅಧಿಕಾರದ ದರ್ಪ ತೋರಿದರೆ ವೃತ್ತಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಂತಹ ಬದುಕು ಬದುಕಲ್ಲ. ಸಾಮಾಜಿಕ ಸ್ಪಂದನೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪದವಿ ಪಡೆದ ತಕ್ಷಣ ಹಿರಿಯ ವಕೀಲರ ಬಳಿ ಅಭ್ಯಾಸಕ್ಕೆ ಹೋದಾಗ ಕಚೇರಿಯ ಶಿಸ್ತು ಪಾಲಿಸಬೇಕು. ನಿಮ್ಮ ನಡತೆ ಮೇಲೆ ಭವಿಷ್ಯ ರೂಪಿತವಾಗುತ್ತದೆ. ಹೆಚ್ಚು ಅಂಕ ಗಳಿಸಿದ್ದೇನೆ ಎಂಬ ಅಹಂಕಾರವಿದ್ದರೆ ನಿಮ್ಮ ವೃತ್ತಿ ಬದುಕಿನ ಹಿನ್ನಡೆ ಪ್ರಾರಂಭವಾದಂತೆ ಎಂದು ಎಚ್ಚರಿಸಿದರು.
ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಅಂಗೈನಲ್ಲೇ ನ್ಯಾಯಾಲಯದ ತೀರ್ಪುಗಳು ದೊರೆಯುತ್ತಿವೆ. ಈ ಎಲ್ಲವನ್ನು ಬಳಸಿಕೊಂಡು ಅಧ್ಯಯನದ ವೇಗ ಹೆಚ್ಚಿಸಿಕೊಳ್ಳಬೇಕು ಎಂದರು.
ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿದೆ. ಈಗಾಗಲೇ ಅಮೇರಿಕಾದಲ್ಲಿ ಈ ತಂತ್ರಜ್ಞಾನ ಕಾನೂನು ಕ್ಷೇತ್ರಕ್ಕೂ ಕಾಲಿಟ್ಟಿದೆ. ಕೆಲ ವರ್ಷಗಳಲ್ಲಿ ನಮ್ಮ ನೆಲಕ್ಕೂ ಕಾಲಿಟ್ಟರೆ ಯಾರೂ ಅಚ್ಚರಿ ಪಡಬೇಕಿಲ್ಲ. ಆದ್ದರಿಂದ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಹೊರ ಜಗತ್ತಿನ ಬೆಳವಣಿಗೆಗಳನ್ನು ಗಮನಿಸಬೇಕು ಎಂದು ಹೇಳಿದರು.
ನಾವುಗಳು ಇನ್ನೂ ಬ್ರಿಟಿಷ್‌ನ ಕಾನೂನು ಅಧ್ಯಯನ ನಡೆಸುತ್ತಿದ್ದೇವೆ. ಕನ್ನಡದಲ್ಲಿ ಅವಕಾಶವಿದ್ದರೂ ಸಹ ಅಧ್ಯಯನಕ್ಕೆ ಬೇಕಾದ ಪೂರಕ ಸಾಮಾಗ್ರಿಗಳು ಸಿಗುವುದಿಲ್ಲ. ಕೆಲವು ತೀರ್ಪುಗಳನ್ನು ಅರ್ಥ ಮಾಡಿಕೊಳ್ಳುವುದು ಸಹ ಕಷ್ಟ. ಆ ಕಾರಣಕ್ಕೆ ಹಿಂಜರಿಕೆ ಮನೋಭಾವದಿಂದ ಹೊರಬಂದು ಇಂಗ್ಲೀಷ್ ಭಾಷೆ ಕಲಿಯಿರಿ ಎಂದು ಸಲಹೆ ನೀಡಿದರು.
ಸರಸ್ವತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಹೆಚ್.ಹನುಮಂತಪ್ಪ ಮಾತನಾಡಿ, ವಕೀಲ ವೃತ್ತಿಯಲ್ಲಿ ನಿರಂತರ ಅಭ್ಯಾಸ ಮತ್ತು ಬದುಕಿನ ಭಾಷೆ ಕಲಿಯುವುದು ಬಹಳ ಮುಖ್ಯ. ಕಾಲೇಜಿನಲ್ಲಿ ಕಾನೂನು ಪದವಿ ಮಾತ್ರ ದೊರೆಯುತ್ತದೆ. ಆದರೆ ನಿಮ್ಮ ಶ್ರಮದಿಂದ ಮಾತ್ರ ವಕೀಲರಾಗಲು ಸಾಧ್ಯ ಎಂದರು.
ಈ ಕ್ಷೇತ್ರದಲ್ಲಿ ನೂರಾರು ಅವಕಾಶಗಳಿವೆ. ಹೊಸತನವನ್ನು ಮೈಗೂಡಿಸಿಕೊಂಡು ಭರವಸೆಯಿಂದ ಕೆಲಸ ಮಾಡಬೇಕು. ಆದರೆ ಕಲಿಕೆಯ ಮನಸ್ಥಿತಿ ಮಾತ್ರ ಜೀವನದ ಕೊನೆ ಕ್ಷಣದವರೆಗೂ ಇರಬೇಕು ಎಂದು ತಿಳಿಸಿದರು.
ಪ್ರಾಚಾರ್ಯರಾದ ಪ್ರೊ.ಎಂ.ಎಸ್.ಸುಧಾದೇವಿ, ಸಹಾಯಕ ಪ್ರಾಧ್ಯಾಪಕ ಎಸ್.ಎಂ.ಹರ್ಷ, ಡಾ.ಎನ್.ಡಿ.ಗೌಡ, ಆಡಳಿತಾಧಿಕಾರಿ ಪ್ರೊ.ಡಿ.ಹೆಚ್.ನಟರಾಜ, ಹಿರಿಯ ವಕೀಲರಾದ ಫಾತ್ಯರಾಜನ್, ಡಿ.ಕೆ.ಶೀಲಾ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕ ಪಿ.ಸಿ.ಮುರುಗೇಶ್ ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!