ಹೊಸ ದಿಗಂತ ವರದಿ, ಚಿತ್ರದುರ್ಗ:
ಇಂದಿನ ದಿನಗಳಲ್ಲಿ ಹಿಂದೂ ಸಮಾಜ ಒಡೆದು ಚೂರಾಗಿದ್ದು, ಒಗ್ಗಟಾಗಬೇಕಾದ ಅಗತ್ಯವಿದೆ. ಹಿಂದು ಎಲ್ಲೆ ಇದ್ದರೂ ಸಹ ಅವನು ನಮ್ಮವನು ಎಂಬ ಮನೋಭಾವ ಬರಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.
ನಗರದ ಕಬೀರಾನಂದಾಶ್ರಮದಲ್ಲಿ ಮಹಾ ಶಿವರಾತ್ರಿ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಶಿವನಾಮ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಗುರುವಿನ ಮಾರ್ಗದರ್ಶನದ ಅಗತ್ಯವಿದೆ. ಬಹಳಷ್ಟು ಜನರಿಗೆ ತಮ್ಮ ಬದುಕಿನ ಬಗ್ಗೆ ಗೊತ್ತಿಲ್ಲ. ಟಿ.ವಿ. ಅಥವಾ ಮೊಬೈಲ್‌ನಲ್ಲಿ ಬಿಜಿಯಾಗಿರುತ್ತಾರೆ. ಒಂಟಿಯಾಗಿ ಇರುವ ವಾತಾವರಣ ನಿರ್ಮಾಣ ಮಾಡಿಕೊಳ್ಳುವುದಿಲ್ಲ. ಮಾನವನ ಮನಸ್ಸು ಶುದ್ದವಾಗಿಲ್ಲ. ಅದು ಚರಂಡಿಗಿಂತ ಕಡೆಗಿಂತ ಕಡೆಯಾಗಿದೆ ಎಂದರು.
ಶಿವನಾಮ ಸ್ಮರಣೆಯಿಂದ ಮಾನವನ ಬದುಕು ಸನ್ಮಾರ್ಗದತ್ತ ಸಾಗುತ್ತದೆ. ಶಿವರಾತ್ರಿ ಜಾಗರಣೆ ಜಾಗೃತಿ ಮೂಡಿಸುತ್ತದೆ. ಮನುಷ್ಯ ವಿವೇಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಆತ್ಮ ಮಾತ್ರ ಸತ್ಯ ಎಂಬ ಸತ್ಯವನ್ನು ತಿಳಿಸಿದ ರಾಷ್ಟ್ರ ಭಾರತ. ಪ್ರತಿಯೊಬ್ಬರೂ ಸ್ವಾವಲಂಬಿ ಬದುಕು ನಡೆಸುವಂತಾಗಬೇಕು. ಇದನ್ನು ಶಿವ ತೋರಿಸಿಕೊಟ್ಟಿದ್ದಾನೆ. ಅದರಂತೆ ನಾವು ನಡೆಯಬೇಕಿದೆ. ಆತ್ಮನಿರ್ಭಯದಿಂದ ಬದುಕು ಸಾಗಿಸಬೇಕು. ಕೊರೋನಾ ಬಂದಾಗ ಬೇರೆ ದೇಶಗಳು ನಮ್ಮ ದೇಶಕ್ಕೆ ವ್ಯಾಕ್ಸಿನ್ ಮಾರಾಟಕ್ಕೆ ಮುಂದಾದರು. ಆದರೆ ಸ್ವಂತವಾಗಿ ವ್ಯಾಕ್ಸಿನ್ ತಯಾರಿಸಿ ಬೇರೆ ದೇಶಗಳಿಗೂ ಉಚಿತವಾಗಿ ನೀಡಿದ ಹೆಮ್ಮೆ ಭಾರತದ್ದು ಎಂದು ಹೇಳಿದರು.
ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆನ್ನುವುದನ್ನು ಭಾರತ ಎಲ್ಲರಿಗೂ ಕಲಿಸಿದೆ. ಇಂದಿನ ಸಮಾಜ ಛಿಧ್ರವಾಗಿದೆ. ಆದರೆ ಸುಂದರ ಸಮಾಜ ನಿರ್ಮಾಣ ಮಾಡಿದವನು ಶಿವ. ಹಿಂದು ಸಮಾಜವನ್ನು ಒಂದುಗೂಡಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕಿದೆ. ಕೆಲವೊಮ್ಮೆ ಹಿಂದುಗಳ ಜಾತಿ, ಧರ್ವವನ್ನು ವಿವರವಾಗಿ ತಿಳಿಸಲಾಗುತ್ತದೆ. ಆದರೆ ಮುಸ್ಲಿಂ ಇಂತಹ ಯಾವುದೇ ವಿವರ ನೀಡುವುದಿಲ್ಲ. ಅವರಲ್ಲಿಯೂ ಸಹ ಒಳ ಜಗಳ ಇದೆ. ಅದರೆ ಅದನ್ನು ಬಹಿರಂಗ ಮಾಡುತ್ತಿಲ್ಲ. ಹಿಂದುಗಳು ಒಂದು ಎನ್ನುವ ಮನೋಭಾವ ನಮ್ಮಲ್ಲಿ ಮೂಡಬೇಕಿದೆ ಎಂದು ತಿಳಿಸಿದರು.
ಇಂದಿನ ದಿನಮಾನದಲ್ಲಿ ಯುವಜನತೆಯಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಬಲಢ್ಯರಾಗಿ ಮಾಡುವಂತ ಪ್ರಯತ್ನಗಳು ನಡೆಯಬೇಕಿದೆ. ಎಲ್ಲರು ಒಗ್ಗಟಾಗಿ ಇದ್ದಾಗ ಮಾತ್ರ ಸಮಗ್ರವಾದ ಸಮರ್ಥವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇಲ್ಲವಾದಲ್ಲಿ ಸಮಾಜ ಛಿಧ್ರವಾಗುತ್ತದೆ. ಈ ಪ್ರಯತ್ನ ನಮ್ಮ ಮನೆಯಿಂದಲೇ ನಡೆಯಬೇಕು ಎಂದು ತಿಳಿಸಿದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಚಿತ್ರದುರ್ಗಕ್ಕೆ ಬರಗಾಲ ಬಂದಾಗ ಆದಿಚುಂಚನಗಿರಿ ಶ್ರೀಗಳು ರಾಗಿ, ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ನೀಡುವ ಉತ್ತಮ ಕಾರ್ಯ ಮಾಡಿದ್ದಾರೆ. ಶ್ರೀಮಠವು ಸಹ ವೃದ್ಧಾಶ್ರಮ, ಅನಾಥ ಮಕ್ಕಳ ಪೋಷಣೆ ಮಾಡುವ ಮೂಲಕ ಅವರಿಗೆ ಆಸರೆಯಾಗಿದ್ದಾರೆ ಎಂದರು.
ಹುಬ್ಬಳ್ಳಿಯ ಸಿದ್ದಾರೂಢಮಠದ ಸಚ್ಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಮಾನವ ತನ್ನ ಸುಖಕ್ಕಾಗಿ ಅಂತರಂಗದಲ್ಲಿ ಹಂಬಲಿಸುತ್ತಾನೆ. ಅದನ್ನು ಪಡೆದಾಗ ಅಸೆ ಆಕಾಂಕ್ಷ್ಷೆಗಳು ಇರಬಾರದು. ಗುರುಗಳ ಚರಣದಲ್ಲಿ ತನ್ಮಯರಾಗಬೇಕಿದೆ. ಆಗ ಮಾತ್ರ ನೆಮ್ಮದಿ ಸಿಗಲು ಸಾಧ್ಯ ಎಂದು ಹೇಳಿದರು.
ಹುಬ್ಬಳ್ಳಿಯ ಜಡೆ ಸಿದ್ದೇಶ್ವರ ಮಠದ ರಮಾನಂದ ಭಾರತಿ ಸ್ವಾಮೀಜಿ, ವಿಜಯಪುರದ ವನಶ್ರೀಮಠದ ಡಾ.ಬಸವಕುಮಾರ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬದರಿನಾಥ್, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯ ಉಪಾಧ್ಯಕ್ಷ ಡಾ.ಟಿ.ಹೆಚ್.ಅಂಜನಪ್ಪ, ಉದ್ಯಮಿಗಳಾದ ಪಟೇಲ್ ಶಿವಕುಮಾರ್, ಶಂಕರಮೂರ್ತಿ, ಉತ್ಸವ ಸಮಿತಿ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ಸಂಪಿಗೆ ಸಿದ್ದೇಶ್ವರ ಭಾಗವಹಿಸಿದ್ದರು.
ಡಿ.ಕೆ.ಸುಮನ ಪ್ರಾರ್ಥಿಸಿದರು. ನಾಗರಾಜ್ ಸಗಂ ಸ್ವಾಗತಿಸಿದರು. ಜಯಪ್ರಾಣೇಶ್ ಕಾರ್ಯಕ್ರಮ ನಿರೂಪಿಸಿದರು.