ಚಿತ್ರದುರ್ಗ ನಗರದ ಐತಿಹಾಸಿಕ ಕೋಟೆ, ಚಂದ್ರವಳ್ಳಿ ಪ್ರದೇಶ, ಧವಳಪ್ಪನ ಗುಡ್ಡ ಸೇರಿದಂತೆ ವಿವಿಧ ಭಾಗಗಳಲ್ಲಿ ಕಳೆದ ಅನೇಕ ವರ್ಷಗಳಿಂದ ಸಂಶೋಧನೆಗಳು ನಡೆದಿವೆ. ಹುಲ್ಲೂರು ಶ್ರೀನಿವಾಸ ಜೋಯಿಸರು, ಲಕ್ಷ್ಮಣ ತೆಲಗಾವಿ, ಪ್ರೊ.ಶ್ರೀಶೈಲ ಆರಾಧ್ಯ, ಡಾ.ಬಿ.ರಾಜಶೇಖರಪ್ಪ ಸೇರಿದಂತೆ ಅನೇಕರು ಸಂಶೋಧನೆ ನಡೆಸುವ ಮೂಲಕ ಹೊಸ ಹೊಸ ಐತಿಹಾಸಿಕ ದಾಖಲೆಗಳನ್ನು ಹೆಕ್ಕಿ ತೆಗೆದಿದ್ದಾರೆ. ಅದರಂತೆ ಮೊಳಕಾಲ್ಮುರು ತಾಲ್ಲೂಕಿನ ಅಶೋಕ ಸಿದ್ದಾಪುರ ಸೇರಿದಂತೆ ನಾನಾ ಕಡೆಗಳಲ್ಲಿ ಉತ್ಖನನ ನಡೆಸಲಾಗಿದೆ.
ಈಗ ಮತ್ತೊಮ್ಮೆ ಇದೇ ಅಶೋಕ ಸಿದ್ದಾಪುರದ ಬಳಿಯ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಉತ್ಖನನ ಆರಂಭಿಸಲಾಗಿದೆ. ಇದರಿಂದಾಗಿ ಬರೋಬ್ಬರಿ ೭೮ ವರ್ಷಗಳ ಸುದೀರ್ಘ ಅವಧಿಯ ನಂತರ ಮೊಳಕಾಲ್ಮುರು ತಾಲ್ಲೂಕಿನ ಅಶೋಕ ಸಿದ್ದಾಪುರ ಹಾಗೂ ಬ್ರಹ್ಮಗಿರಿ ಬೆಟ್ಟ ಜಗತ್ತಿನ ಗಮನ ಸೆಳೆದಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾಗೂ ಅಮೇರಿಕಾದ ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯ ಸಹಯೋಗದ ಉತ್ಕನನ ಆರಂಭಿಸಲಾಗಿದೆ. ಆಧುನಿಕ ಉಪಕರಣಗಳು, ನೂತನ ತಂತ್ರಜ್ಞಾನದ ನೆರವಿನಿಂದ ಸಂಶೋಧನೆ ಕೈಗೊಂಡಿರುವ ಸಂಶೋಧಕರು ಸಾಕಷ್ಟು ಪಳೆಯುಳಿಕೆಗಳನ್ನು ಸಂಗ್ರಹಿಸಿದ್ದಾರೆ.
ಈ ಹಿಂದೆ ಸರ್ ಮಾರ್ಟಿಮರ್ ವೀಲರ್ ಎಂಬುವರು ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಉತ್ಖನನ ನಡೆಸಿದ್ದರು. ಆಗ ಈ ಸ್ಥಳದಲ್ಲಿ ನವ ಶಿಲಾಯುಗದಿಂದ ಮಧ್ಯ ಕಾಲೀನ ಅವಧಿಯವರೆಗಿನ ಸಾಂಸ್ಕೃತಿಕ ಜಗತ್ತು ಪತ್ತೆಯಾಗಿತ್ತು. ಪ್ರಸ್ತುತ ನಡೆಸುತ್ತಿರುವ ಉತ್ಖನನದಲ್ಲಿ ಪ್ರತಿಯೊಂದು ಸಾಂಸ್ಕೃತಿಕ ಅವಧಿಯ ವಿವರವನ್ನು ಸ್ಟ್ಯಾಟಿಕ್ ಗ್ರಾಫಿಕ್ ದಾಸ್ತಾವೇಜು ಮತ್ತು ಕಲಾಕೃತಿ ವಿಶ್ಲೇಷಣೆಯನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.
ಭಾರತೀಯ ಪುರಾತತ್ವ ಇಲಾಖೆ ಅಧೀಕ್ಷಕ, ಪುರಾತತ್ವ ಶಾಸ್ತ್ರಜ್ಞ ಬಿ.ಪಿ.ಎನ್.ಚಂದ್ರು, ಪೆನ್ಸಿಲ್ವೇನಿಯಾ ವಿ.ವಿ. ಅಧ್ಯಾಪಕ ಹಾಗೂ ಕರ್ನಾಟಕ ವಿ.ವಿ. ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ರವಿ ಕೋರಿಸೆಟ್ಟರ್ ಒಳಗೊಂಡಂತೆ ಧಾರವಾಡ, ಚಿತ್ರದುರ್ಗ ಕಂದಾಯ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾರ್ಚ್ ಅಂತ್ಯದವರೆಗೆ ಉತ್ಖನನ ನಡೆಯುತ್ತಿದೆ.
ಪುರಾತತ್ವ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಕ್ಯಾನ್ ಮಾರಿಸನ್, ಪೆನ್ಸಿಲ್ವೇನಿಯಾ ವಿ.ವಿ.ಯ ಡಾ.ಮಾರ್ಕ್ ಟಿ. ಲೈಸೆಟ್, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಅಧೀಕ್ಷಕ ಎನ್.ವೀರರಾಘವನ್, ಡಾ.ಆರ್.ರಮೇಶ್, ಡಾ.ಬಿ.ವಿನುರಾಜ್, ಸರ್ವೆಯರ್‌ಗಳಾದ ಮುರುಳಿ ಮೋಹನ್, ಛಾಯಾಗ್ರಾಹಕ ಬಸವರಾಜ್ ಮಾಯಾಚಾರಿ ಸುರಕ್ಷಣಾ ಸಹಾಯಕ ಪೊನ್ನತೋಟ ಸುಧೀರ್, ಪೆನ್ಸಿಲ್ವೇನಿಯಾ ವಿ.ವಿ. ಸಂಶೋಧಕ ಡಾ.ಆಸ್ಮಿನ್ ಚಾಡ್‌ಹಿಲ್, ಡಾ.ಸಿ.ಎಸ್.ಅಂಬಲಿ, ಪಿಹೆಚ್‌ಡಿ ವಿದ್ಯಾರ್ಥಿಗಳಾದ ಮೊರಿಯಾ, ಮೆಕೆನಾ, ಜೆನ್ನಿಫರ್ ಫೆಂಗ್ ಸಂಶೋಧನಾ ಕಾರ್ಯದಲ್ಲಿ ತೊಡಗಿದ್ದಾರೆ.