ನಾಳೆ ಬೆಂಗಳೂರಿನಲ್ಲಿ ಚಿತ್ರಸಂತೆ- ವಿಶೇಷತೆಗಳೇನು? ಇಲ್ಲಿದೆ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜನೆವರಿ 8 ರಂದು (ನಾಳೆ) ಬೆಂಗಳೂರಿನ ಕುಮಾರ ಕೃಪಾ ರಸ್ತೆ, ಕ್ರಿಸೆಂಟ್‌ ರಸ್ತೆ, ಗಾಂಧಿ ಭವನ ರಸ್ತೆಗಳಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ವತಿಯಿಂದ ಚಿತ್ರ ಸಂತೆಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಸಿಎನ್.‌ ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್.ಅಶೋಕ್‌, ಗೃಹ ಸಚಿವ ಅರಗ ಜ್ಞಾನೇಂದ್ರ, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ ಕುಮಾರ್‌ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಚಿತ್ರ ಸಂತೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ 1500ಕ್ಕೂ ಅಧಿಕ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿದ್ದು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್‌, ಒಡಿಶಾ ಸೇರಿದಂತೆ ಹಲವು ರಾಜ್ಯಗಳಿಂದ ಕಲಾವಿದರು ಭಾಗವಹಿಸಲಿದ್ದಾರೆ. ಭಾನುವಾರ ನಡೆಯಲಿರೋ 20ನೇ ಚಿತ್ರ ಸಂತೆಯು ಹಲವು ವಿಶೇಷತೆಗಳಿಂದ ಕೂಡಿದ್ದು ಈ ಕುರಿತಾದ ಕೆಲ ಆಸಕ್ತಿಕರ ಮಾಹಿತಿ ಇಲ್ಲಿದೆ.

– 20ನೇ ಚಿತ್ರ ಸಂತೆಯಲ್ಲಿ ವಿವಿಧ ರಾಜ್ಯಗಳ ಸಾವಿರಾರು ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರು ಪಾಲ್ಗೊಳ್ಳಲಿದ್ದು ಕಲಾವಿದರಿಗೆ ಪ್ರತಿಭಾ ಪ್ರದರ್ಶನದೊಂದಿಗೆ ಕಲೆಯ ಬೆಳವಣಿಗೆ ಕುರಿತು ಚರ್ಚೆ, ಸಂವಾದ, ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗಿದೆ.

– 100 ರೂಪಾಯಿಂದ ಹಿಡಿದು ಹಲವು ಲಕ್ಷದವರೆಗಿನ ಮೌಲ್ಯದ ಕಲಾಕೃತಿಗಳ ಮಾರಾಟ ನಡೆಯಲಿದ್ದು ಚಿತ್ರ ಸಂತೆಯಲ್ಲಿ 4 ರಿಂದ 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ.

– ಮೈಸೂರು ಸಾಂಪ್ರದಾಯಿಕ ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿ ಶೈಲಿ, ತೈಲ-ಜಲವರ್ಣ ಕಲಾಕೃತಿಗಳು ಗಮನ ಸೆಳೆಯಲಿವೆ. ವ್ಯಂಗ್ಯ ಚಿತ್ರ ಪ್ರದರ್ಶನಕ್ಕೂ ಅವಕಾಶವಿದೆ.

– ಕುಂಚ ಅಥವಾ ಪೆನ್ಸಿಲ್‌ ನಿಂದ ಸ್ಥಳದಲ್ಲಿಯೇ ಕಲಾರಸಿಕರ ಭಾವಚಿತ್ರ ರಚಿಸಿಕೊಡುವ ಕಲಾವಿದರೂ ಇಲ್ಲಿ ಭಾಗವಹಿಸಲಿದ್ದಾರೆ.

– ಅಕ್ರಿಲಿಕ್‌, ಕೋಲಾಜ್‌, ಲಿಥೋಗ್ರಾಫ್‌ ಮೊದಲಾದ ಪ್ರಕಾರಗಳ ಕಲಾಕೃತಿಗಳು ದೊರೆಯಲಿವೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!