ಲಿಂಗಾಯತ ನಾಯಕನನ್ನೇ ಆಯ್ಕೆ ಮಾಡಿ : ಸಚಿವ ಶಂಕರಪಾಟೀಲ ಮುನೇನಕೊಪ್ಪ

ಹೊಸದಿಗಂತ ವರದಿ ಹುಬ್ಬಳ್ಳಿ:

ಬಿಜೆಪಿಯಿಂದ ಈ ಬಾರಿ ಲಿಂಗಾಯತ ಮುಖ್ಯಮಂತ್ರಿ ಮಾಡುವಂತೆ ಕೇಂದ್ರ ಹಾಗೂ ರಾಜ್ಯದ ವರಿಷ್ಠರ ಮೇಲೆ ಒತ್ತಡ ಹೇರುತ್ತೇವೆ. ಹೀಗಾಗಿ ಮತದಾರರು ಹೆಚ್ಚು ಲಿಂಗಾಯತ ನಾಯಕರನ್ನು ಆಯ್ಕೆ ಮಾಡಬೇಕೆಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್’ನವರು ಲಿಂಗಾಯತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎನ್ನುವುದು ಅಪ್ರಸ್ತುತ, ಈ ಹಿಂದೆ ಲಿಂಗಾಯತ ನಾಯಕರಾದ ವೀರೇಂದ್ರ ಪಾಟೀಲ್ ಅವರನ್ನು ನಡೆಸಿಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್’ನವರು ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂದು ಹೇಳುತ್ತಾ ಅಹಿಂದ ಸಿದ್ದಾಂತವನ್ನು ಕೈಗೊಂಡು, ಅಹಿಂದ ವರ್ಗದವರಿಗೆ ಯಾವುದೇ ಯೋಜನೆ ನೀಡದೇ ಮತಬ್ಯಾಂಕ್’ಗಾಗಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುತ್ತಾ ಬಂದಿದ್ದಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್’ನವರು ಇಷ್ಟು ವರ್ಷಗಳ ಕಾಲ ಕೇವಲ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಹೊರತು ಅಭಿವೃದ್ಧಿ ಕಾರ್ಯ ಮಾಡಿಲ್ಲ, ಆದರೆ ನಮ್ಮ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ವಿವಿಧ ಜನಪರ ಯೋಜನೆಗಳನ್ನು ಜನರಿಗೆ ನೀಡಿದೆ ಎಂದರು.

ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎನ್ನುವ ಕಾಂಗ್ರೆಸ್ ಈ ಹಿಂದೆ ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾಗಿತ್ತು. ಹೀಗಾಗಿ ಹೀನಾಯ ಸೋಲು ಅನುಭವಿಸಿತು. ನಾವು ಕೂಡಾ ಈ ಬಾರಿ ಬಹುತೇಕ ಲಿಂಗಾಯತರಿಗೆ ಟಿಕೆಟ್ ನೀಡಿದ್ದೇವೆ. ಜೊತೆಗೆ ಅಭ್ಯರ್ಥಿ ಪಟ್ಟಿ ಹೊಸಬರಿಂದ ತುಂಬಿದೆ ಎಂದು ಹೇಳಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದಿರುವುದರಿಂದ ಪಕ್ಷಕ್ಕೆ ಯಾವುದೇ ದಕ್ಕೆ ಉಂಟಾಗುವುದಿಲ್ಲ. ಅವರು ನಮ್ಮ ನಾಯಕರು, ಬಿಜೆಪಿ ಕಟ್ಟಿ ಬೆಳೆಸಿದವರು. ಅವರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಆದರೆ ಏನೇ ಆದರೂ ಪಕ್ಷದಲ್ಲಿದ್ದುಕೊಂಡು ಮುಂದುವರೆಯಬೇಕಿತ್ತು. ಅವರಿಗೆ ಮನಸ್ಸಿಗೆ ನೋವಾಗಿ ಪಕ್ಷ ತೊರೆದಿದ್ದಾರೆ ಎಂದರು.

ಬಿಜೆಪಿಯಲ್ಲಿ ಭ್ರಷ್ಟಾಚಾರ ಇರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವರು ಯಾವುದೇ ರೀತಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಗುರು ಪಾಟೀಲ್, ಪ್ರಶಾಂತ ಹಾವನಗಿ, ಮಂಜುನಾಥ ನಾಗನಗೌಡ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!