October 10, 2026
Saturday, October 10, 2026
spot_img

CINE | ತೆರೆಮರೆಯಲ್ಲಿ ನಿರ್ಮಾಪಕರ ‘ಕಿರಿಕ್’: ಕಾನೂನು ಸಂಕಷ್ಟದಲ್ಲಿ ಸಿಲುಕಿದ ‘ಹೇರಾ ಫೇರಿ’ ಸಿನಿಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಐಕಾನಿಕ್ ಕಾಮಿಡಿ ಫ್ರಾಂಚೈಸಿ ‘ಹೇರಾ ಫೇರಿ’ಯ ಮೂರನೇ ಭಾಗ ಆರಂಭವಾಗುವ ಮೊದಲೇ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ನಟರಾದ ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅವರ ಕಾಂಬಿನೇಷನ್ ಮತ್ತೆ ಒಂದಾಗುತ್ತಿದೆ ಎನ್ನುವ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಈಗ ನಿರ್ಮಾಪಕರ ನಡುವಿನ ಜಗಳ ತಣ್ಣೀರೆರಚಿದೆ.

ಸಾಮಾನ್ಯವಾಗಿ ಈ ಫ್ರಾಂಚೈಸಿಯ ಹಿಂದೆ ನಿರ್ಮಾಪಕ ಫಿರೋಜ್ ನಾಡಿಯಾವಾಲಾ ಹೆಸರು ಕೇಳಿಬರುತ್ತಿತ್ತು. ಆದರೆ ಈಗ ನಿರ್ಮಾಪಕ ವಿಜಯ್ ಕುಮಾರ್ ಗಿಲಾನಿ ಅವರು ಈ ಚಿತ್ರದ ಹಕ್ಕುಗಳು ಕಾನೂನುಬದ್ಧವಾಗಿ ತಮ್ಮ ಬಳಿಯೇ ಇವೆ ಎಂದು ಪ್ರತಿಪಾದಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. “ಫಿರೋಜ್ ನಾಡಿಯಾವಾಲಾ ಅವರಿಗೆ ಈ ಚಿತ್ರದ ಮೇಲೆ ಯಾವುದೇ ಹಕ್ಕಿಲ್ಲ, ಸದ್ಯದಲ್ಲೇ ಸತ್ಯ ಹೊರಬರಲಿದೆ,” ಎಂದು ಗಿಲಾನಿ ಹೇಳಿಕೆ ನೀಡಿದ್ದಾರೆ.

ವರದಿಗಳ ಪ್ರಕಾರ, ಫಿರೋಜ್ ನಾಡಿಯಾವಾಲಾ ಅವರು ಕಳೆದ ಕೆಲವು ವರ್ಷಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದರು. ಈ ಹಿಂದೆ ಅವರು ಪಡೆದಿದ್ದ ಸಾಲವನ್ನು ತೀರಿಸದ ಕಾರಣ, ‘ಹೇರಾ ಫೇರಿ’ ಸೇರಿದಂತೆ ಕೆಲವು ಚಿತ್ರಗಳ ಹಕ್ಕುಗಳನ್ನು ಬೇರೆಯವರಿಗೆ ವರ್ಗಾಯಿಸಲಾಗಿತ್ತು ಎನ್ನಲಾಗುತ್ತಿದೆ. ಇದೇ ಹಕ್ಕುಗಳು ಈಗ ವಿಜಯ್ ಕುಮಾರ್ ಗಿಲಾನಿ ಅವರ ಪಾಲಾಗಿವೆ ಎಂಬುದು ಸದ್ಯದ ಚರ್ಚೆ.

ಈಗಾಗಲೇ ಚಿತ್ರದ ಪ್ರೋಮೋ ಚಿತ್ರೀಕರಣ ಕೂಡ ಮುಗಿದಿತ್ತು. ಆದರೆ ಈ ಮಾಲೀಕತ್ವದ ವಿವಾದದಿಂದಾಗಿ ಶೂಟಿಂಗ್ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ನ್ಯಾಯಾಲಯವು ಈ ವಿವಾದ ಇತ್ಯರ್ಥವಾಗುವವರೆಗೆ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ಕಂಟೆಂಟ್ ಬಿಡುಗಡೆ ಮಾಡದಂತೆ ತಡೆಯಾಜ್ಞೆ ನೀಡುವ ಸಾಧ್ಯತೆಯೂ ದಟ್ಟವಾಗಿದೆ.

ತೆರೆಯ ಮೇಲೆ ಪ್ರೇಕ್ಷಕರನ್ನು ನಗಿಸುತ್ತಿದ್ದ ಈ ಸಿನಿಮಾ ತಂಡ, ಈಗ ತೆರೆಯ ಹಿಂದೆ ಹಕ್ಕುಗಳಿಗಾಗಿ ಕೋರ್ಟ್ ಕಚೇರಿ ಅಲೆಯುವಂತಾಗಿರುವುದು ಬಾಲಿವುಡ್ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

Must Read