October 10, 2026
Saturday, October 10, 2026
spot_img

CINE | ಬಾಲಿವುಡ್‌ ನಟ ಸಲ್ಮಾನ್ ಖಾನ್-ರಾಜ್, ಡಿಕೆ ಕಾಂಬಿನೇಷನ್‌ನಲ್ಲಿ ಬರಲಿದೆ ಬಿಗ್ ಬಜೆಟ್ ಚಿತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಇದೀಗ ದಕ್ಷಿಣ ಭಾರತದ ಪ್ರತಿಭಾನ್ವಿತ ನಿರ್ದೇಶಕರ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಈಗಾಗಲೇ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಾಣದಲ್ಲಿ ಹಾಗೂ ವಂಶಿ ಪೈಡಪಲ್ಲಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿರುವ ಸಲ್ಮಾನ್, ಇದೀಗ ಮತ್ತೊಂದು ಬಿಗ್ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ. ವಿಶೇಷವೆಂದರೆ, ಈ ಚಿತ್ರವನ್ನು ಸಮಂತಾ ಅಭಿನಯದ ‘ಸಿಟಾಡೆಲ್: ಹನಿ ಬನಿ’ ಖ್ಯಾತಿಯ ರಾಜ್ ಮತ್ತು ಡಿಕೆ ಜೋಡಿ ನಿರ್ದೇಶಿಸಲಿದೆ.

ಹಿಂದಿ ಚಿತ್ರರಂಗದ ಕ್ರಿಯೇಟಿವ್ ಜೋಡಿ ಎಂದೇ ಹೆಸರಾದ ರಾಜ್ ನಿಧಿಮೋರು ಮತ್ತು ಕೃಷ್ಣ ಡಿಕೆ, ಕಳೆದ ಎರಡು ವರ್ಷಗಳಿಂದ ಒಂದು ವಿಭಿನ್ನ ಕಥೆಯ ಮೇಲೆ ಕೆಲಸ ಮಾಡುತ್ತಿದ್ದರು. ಇದೀಗ ಆ ಕಥೆಗೆ ಸಲ್ಮಾನ್ ಖಾನ್ ಅವರೇ ಸೂಕ್ತ ಎಂದು ತೀರ್ಮಾನಿಸಿ ಅವರಿಗೆ ಕಥೆ ಒಪ್ಪಿಸಿದ್ದಾರೆ. ಮೂಲಗಳ ಪ್ರಕಾರ, ಇದು ಒಂದು ಬೃಹತ್ ಬಜೆಟ್‌ನ ಸೂಪರ್ ಹೀರೋ ಸಿನಿಮಾ ಆಗಿರಲಿದ್ದು, ಸಲ್ಮಾನ್ ಖಾನ್ ಈ ಹಿಂದೆಂದೂ ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಜೋಡಿ ಈವರೆಗೆ ‘ದಿ ಫ್ಯಾಮಿಲಿ ಮ್ಯಾನ್’, ‘ಫರ್ಜಿ’ ಮತ್ತು ‘ಗನ್ಸ್ ಆಂಡ್ ಗುಲಾಬ್ಸ್’ ನಂತಹ ಸೂಪರ್ ಹಿಟ್ ವೆಬ್ ಸರಣಿಗಳನ್ನು ನೀಡಿದೆ. ಮೊದಲ ಬಾರಿಗೆ ಇಷ್ಟು ದೊಡ್ಡ ಸೂಪರ್ ಸ್ಟಾರ್ ಜೊತೆ ಸಿನಿಮಾ ಮಾಡುತ್ತಿರುವ ರಾಜ್ ಮತ್ತು ಡಿಕೆ, ಚಿತ್ರದಲ್ಲಿ ಆಕ್ಷನ್ ಜೊತೆಗೆ ತಮ್ಮದೇ ಶೈಲಿಯ ಹಾಸ್ಯ ಮತ್ತು ವಿನೂತನ ಕಥಾಹಂದರವನ್ನು ಅಳವಡಿಸಲಿದ್ದಾರೆ.

ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಚಾಲನೆಯಲ್ಲಿದ್ದು, ಮೂಲಗಳ ಪ್ರಕಾರ ಅಕ್ಟೋಬರ್ 2026 ರಿಂದ ಅಧಿಕೃತವಾಗಿ ಚಿತ್ರೀಕರಣ ಆರಂಭವಾಗಲಿದೆ.

ಸಲ್ಮಾನ್ ಖಾನ್ ಇತ್ತೀಚಿನ ದಿನಗಳಲ್ಲಿ ದಕ್ಷಿಣದ ನಿರ್ದೇಶಕರಿಗೆ ಹೆಚ್ಚು ಮನ್ನಣೆ ನೀಡುತ್ತಿದ್ದಾರೆ. ಈ ಹಿಂದೆ ಎ.ಆರ್. ಮುರುಗದಾಸ್ ಅವರ ‘ಸಿಕಂದರ್’ ಚಿತ್ರದಲ್ಲಿ ನಟಿಸಿದ್ದರು. ಇದೀಗ ವಂಶಿ ಪೈಡಪಲ್ಲಿ ಚಿತ್ರ ಮುಗಿಯುತ್ತಿದ್ದಂತೆ ರಾಜ್ ಮತ್ತು ಡಿಕೆ ಸಾರಥ್ಯದ ಚಿತ್ರಕ್ಕೆ ಸಲ್ಲು ಸಜ್ಜಾಗಲಿದ್ದಾರೆ.

Must Read