October 10, 2026
Saturday, October 10, 2026
spot_img

CINE | ದೀಪಿಕಾ-ರಣವೀರ್ ಮನೆಯಲ್ಲಿ ಸಂಭ್ರಮ: ಬಾಲಿವುಡ್‌ನ ಸ್ಟಾರ್ ಜೋಡಿಯಿಂದ ಸಿಕ್ತು ಗುಡ್ ನ್ಯೂಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕುಟುಂಬಕ್ಕೆ ಈಗ ಮತ್ತೊಬ್ಬ ಅತಿಥಿಯ ಆಗಮನವಾಗುತ್ತಿದೆ. ಹೌದು, ದೀಪಿಕಾ ಎರಡನೇ ಬಾರಿಗೆ ತಾಯಿಯಾಗುತ್ತಿದ್ದು, ಈ ಸಿಹಿ ಸುದ್ದಿಯನ್ನು ಈ ದಂಪತಿ ಅಧಿಕೃತವಾಗಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ತಮ್ಮ ಮೊದಲ ಪುತ್ರಿ ದುವಾ ಜೊತೆಗಿನ ಸುಂದರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಈ ಜೋಡಿ, ಶೀರ್ಷಿಕೆಯಲ್ಲಿ ‘ದೃಷ್ಟಿ ತಗುಲದಿರಲಿ’ ಎಂಬ ಅರ್ಥ ನೀಡುವ ಎಮೋಜಿಗಳನ್ನು ಬಳಸುವ ಮೂಲಕ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಕಂಡ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

2018ರಲ್ಲಿ ಇಟಲಿಯಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಗೆ, 2024ರ ಸೆಪ್ಟೆಂಬರ್ 8ರಂದು ಮೊದಲ ಪುತ್ರಿ ದುವಾ ಜನಿಸಿದ್ದಳು. ಈಗ ಮಗಳು ಹುಟ್ಟಿದ ಎರಡೇ ವರ್ಷಕ್ಕೆ ದೀಪಿಕಾ ಮತ್ತು ರಣವೀರ್ ಎರಡನೇ ಮಗುವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.

ಸದ್ಯ ರಣವೀರ್ ಸಿಂಗ್ ಅವರ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇತ್ತ ದೀಪಿಕಾ ಕೂಡ ಶಾರುಖ್ ಖಾನ್ ನಟನೆಯ ‘ಕಿಂಗ್’ ಹಾಗೂ ಅಲ್ಲು ಅರ್ಜುನ್-ಅಟ್ಲಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ನಟಿಸಬೇಕಿದೆ. ಆದರೆ, ಪ್ರೆಗ್ನೆನ್ಸಿ ಹಾಗೂ ತಮ್ಮ ಕೆಲಸದ ನಿಯಮಗಳ ಕಾರಣದಿಂದಾಗಿ ದೀಪಿಕಾ ಸದ್ಯ ಸಿನಿಮಾಗಳಿಂದ ಸ್ವಲ್ಪ ಕಾಲ ಬಿಡುವು ಪಡೆಯುವ ಸಾಧ್ಯತೆಯಿದೆ.

ಸಿನಿಮಾ ಕ್ಷೇತ್ರದ ಯಶಸ್ಸಿನ ನಡುವೆಯೇ ಈ ಸಿಹಿ ಸುದ್ದಿ ಸಿಕ್ಕಿರುವುದು ಅವರ ಅಭಿಮಾನಿಗಳಲ್ಲಿ ಹೊಸ ಸಂಭ್ರಮವನ್ನು ತಂದಿದೆ.

Must Read