May 17, 2026
Sunday, May 17, 2026
spot_img

CINE | ತಾಯಿ ಆಗುವ ಸಂಭ್ರಮದಲ್ಲೂ ಸಿನಿಮಾಗಾಗಿ ಅಖಾಡಕ್ಕಿಳಿದ ದೀಪಿಕಾ: ಅಟ್ಲಿ ಚಿತ್ರಕ್ಕಾಗಿ ಬಿಗ್ ರಿಸ್ಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಸದ್ಯ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಮೊದಲ ಮಗಳು ‘ದುವಾ’ ನಂತರ ಈಗ ಎರಡನೇ ಮಗುವಿನ ಆಗಮನದ ಖುಷಿಯಲ್ಲಿರುವ ದೀಪಿಕಾ, ಈ ಸುಂದರ ಕ್ಷಣಗಳ ನಡುವೆಯೂ ವೃತ್ತಿಪರತೆಗೆ ಮೊದಲ ಆದ್ಯತೆ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ನಟಿಯರು ವಿಶ್ರಾಂತಿಗೆ ಮೊರೆ ಹೋಗುತ್ತಾರೆ. ಆದರೆ ದೀಪಿಕಾ ಮಾತ್ರ ಬಹುನಿರೀಕ್ಷಿತ ‘ರಾಕಾ’ ಸಿನಿಮಾದ ಶೂಟಿಂಗ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ನಿರ್ದೇಶಕ ಅಟ್ಲಿ ಕುಮಾರ್ ಹಾಗೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಶನ್‌ನ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಇದೆ. ದೀಪಿಕಾ ಎರಡನೇ ಬಾರಿಗೆ ಗರ್ಭಿಣಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ, ಸಿನಿಮಾದ ಚಿತ್ರೀಕರಣ ವಿಳಂಬವಾಗಬಹುದೇ ಎಂದು ಫ್ಯಾನ್ಸ್ ಚಿಂತಿತರಾಗಿದ್ದರು. ಆದರೆ ಈಗ ಸಿಕ್ಕಿರುವ ಮಾಹಿತಿ ಅವರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ದೀಪಿಕಾ ಪಡುಕೋಣೆ ಅವರು ಈ ಸ್ಥಿತಿಯಲ್ಲೂ ಸಿನಿಮಾದ ರಿಸ್ಕಿ ಆ್ಯಕ್ಷನ್ ಸನ್ನಿವೇಶಗಳಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ. ಚಿತ್ರತಂಡವು ಅವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸೆಟ್‌ನಲ್ಲಿ ಸದಾ ವೈದ್ಯರ ತಂಡ ಉಪಸ್ಥಿತರಿರುವಂತೆ ನೋಡಿಕೊಳ್ಳಲಾಗಿದೆ. ಪ್ರತಿಯೊಂದು ಶೂಟಿಂಗ್ ಹಂತದಲ್ಲೂ ವೈದ್ಯರ ಸಲಹೆ ಪಡೆದೇ ದೀಪಿಕಾ ಕ್ಯಾಮೆರಾ ಎದುರಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಬಿಡುಗಡೆಯಾದ ‘ರಾಕಾ’ ಚಿತ್ರದ ಫಸ್ಟ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿತ್ತು. ಈಗ ದೀಪಿಕಾ ಅವರ ಈ ಸಮರ್ಪಣಾ ಮನೋಭಾವ ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ‘ರಾಕಾ’ ಚಿತ್ರದ ಜೊತೆಗೆ ಶಾರುಖ್ ಖಾನ್ ನಟನೆಯ ‘ಕಿಂಗ್’ ಚಿತ್ರದಲ್ಲೂ ದೀಪಿಕಾ ಕಾಣಿಸಿಕೊಳ್ಳಲಿದ್ದು, ಮುಂದಿನ ಕೆಲವು ತಿಂಗಳುಗಳ ಕಾಲ ಅವರು ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿರಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !