ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಕಾಲಿವುಡ್ ಜೋಡಿ ನಟ ಸೂರ್ಯ ಹಾಗೂ ತ್ರಿಷಾ ಕೃಷ್ಣನ್ ನಟನೆಯ, ಆರ್‌ಜೆ ಬಾಲಾಜಿ ನಿರ್ದೇಶನದ ಆ್ಯಕ್ಷನ್-ಡ್ರಾಮಾ ಮೂವಿ ‘ಕರುಪ್ಪು’ ಕೊನೆಗೂ ವಿಶ್ವಾದ್ಯಂತ ತೆರೆಕಂಡಿದೆ. ತಾಂತ್ರಿಕ ಕಾರಣಗಳಿಂದಾಗಿ ಮೇ 14ರ ಬದಲು ಒಂದು ದಿನ ತಡವಾಗಿ ರಿಲೀಸ್ ಆದರೂ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ‘ಕರುಪ್ಪು’ ಚಿತ್ರದ ಟ್ವಿಟರ್ ವಿಮರ್ಶೆಗಳು ಸಖತ್ ವೈರಲ್ ಆಗುತ್ತಿವೆ. ಇತ್ತೀಚಿನ ಚಿತ್ರಗಳಲ್ಲಿ ಕಮರ್ಷಿಯಲ್ ಎಲಿಮೆಂಟ್‌ಗಳ ಕೊರತೆ ಎದುರಿಸುತ್ತಿದ್ದ ಸೂರ್ಯ ಅಭಿಮಾನಿಗಳಿಗೆ ಈ ಸಿನಿಮಾ ಹೊಸ ಜೋಶ್ ನೀಡಿದೆ. “ಸೂರ್ಯ ಕೇವಲ ಸ್ಕ್ರೀನ್ ಮೇಲೆ ಬಂದಿಲ್ಲ, ಬದಲಿಗೆ ಚಿತ್ರರಂಗದಲ್ಲಿ ತಮ್ಮ ಸಿಂಹಾಸನವನ್ನು ಮರಳಿ ಪಡೆದಿದ್ದಾರೆ” ಎಂದು ಸಿನಿಪ್ರೇಮಿಗಳು ಕೊಂಡಾಡುತ್ತಿದ್ದಾರೆ.
ಇದೊಂದು ಕಮರ್ಷಿಯಲ್ ಎಂಟರ್‌ಟೈನರ್ ಆಗಿದ್ದು, ಚಿತ್ರದ ಇಂಟರ್ವಲ್ ಹಾಗೂ ಕ್ಲೈಮ್ಯಾಕ್ಸ್ ಸನ್ನಿವೇಶಗಳು ರೋಮಾಂಚನಕಾರಿಯಾಗಿ ಮೂಡಿಬಂದಿವೆ. ಆಕ್ಷನ್ ಮತ್ತು ಎಮೋಷನ್ ಎರಡನ್ನೂ ಸಮತೋಲನವಾಗಿ ತಂದಿರುವ ನಿರ್ದೇಶಕ ಆರ್‌ಜೆ ಬಾಲಾಜಿ ಸೈ ಎನಿಸಿಕೊಂಡಿದ್ದಾರೆ. ಸಾಯಿ ಅಭ್ಯಂಕರ್ ಅವರ ಹಿನ್ನೆಲೆ ಸಂಗೀತ ಮತ್ತು ಹೀರೊ ಎಂಟ್ರಿ ಸೀನ್‌ಗಳು ಪ್ರೇಕ್ಷಕರಿಗೆ ಗೂಸ್‌ಬಂಪ್ಸ್ ನೀಡುತ್ತಿವೆ.
ಮೊದಲ ದಿನವೇ ನಟಿ ತ್ರಿಷಾ ಕೃಷ್ಣನ್, ನಿರ್ದೇಶಕ ಆರ್‌ಜೆ ಬಾಲಾಜಿ ಮತ್ತು ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಥಿಯೇಟರ್‌ಗೆ ಭೇಟಿ ನೀಡಿ ಅಭಿಮಾನಿಗಳ ಜೊತೆ ‘ಫಸ್ಟ್ ಡೇ ಫಸ್ಟ್ ಶೋ’ ವೀಕ್ಷಿಸಿದ್ದಾರೆ. ಈ ವೇಳೆ ಸೂರ್ಯ ಸಹೋದರ, ನಟ ಕಾರ್ತಿ ಕೂಡ ಚಿತ್ರತಂಡದ ಜೊತೆಯಾಗಿ ಬೆಂಬಲ ಸೂಚಿಸಿದರು. ಒಟ್ಟಾರೆಯಾಗಿ ‘ಕರುಪ್ಪು’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡುವ ಸಕಲ ಲಕ್ಷಣಗಳನ್ನು ತೋರಿಸುತ್ತಿದೆ.



